ಭಾರತೀಯರ ಮನಗೆದ್ದ ಗ್ಯಾರಿಯವರಿಗೆ ಬೀಳ್ಕೊಡುಗೆಯ ಸಮಯ

ಮಂಗಳವಾರ, 5 ಏಪ್ರಿಲ್ 2011 (16:17 IST)
PTI
ಭಾರತಕ್ಕೆ ವಿಶ್ವಕಪ್ ಗೆದ್ದುಕೊಡುವ ಮೂಲಕ ಆಟಗಾರರ ಸಹಿತ ಕೋಟ್ಯಂತರ ಅಭಿಮಾನಿಗಳ ಅಪಾರ ಪ್ರೀತಿಗೆ ಪಾತ್ರರಾಗಿದ್ದ ದಕ್ಷಿಣ ಆಫ್ರಿಕಾ ಮೂಲದ ಕೋಚ್ ಗ್ಯಾರಿ ಕರ್ಸ್ಟನ್ ಈಗ ತಂಡವನ್ನು ಬಿಟ್ಟು ಮರಳಿ ತವರಿಗೆ ಮರಳುತ್ತಿದ್ದಾರೆ.

ಗ್ಯಾರಿ ಅವರ ಮಾರ್ಗದರ್ಶನದಲ್ಲಿ ಕ್ರಿಕೆಟ್‌ನ ಅತ್ಯುನ್ನತ್ತ ಶಿಖರವನ್ನೇರಿದ ಭಾರತ, 28 ವರ್ಷಗಳ ನಂತರ ಏಕದಿನ ವಿಶ್ವಕಪ್ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದರೊಂದಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕನಸು ನನಸಾಗಿಸುವಲ್ಲಿ ಕರ್ಸ್ಟನ್ ನೆರವಾಗಿದ್ದರು.

ಗ್ಯಾರಿ ಅವರ ಗುತ್ತಿಗೆ ಒಪ್ಪಂದವು ಇದೀಗ ಕೊನೆಗೊಂಡಿದೆ. ಆಟಗಾರರು ಕೋಚ್ ಸ್ಥಾನದಲ್ಲಿ ಮುಂದುವರಿಯಬೇಕೆಂಬ ಬಯಕೆ ವ್ಯಕ್ತಪಡಿಸಿದ್ದರೂ ವೈಯಕ್ತಿಕ ಕಾರಣಗಳಿಂದಾಗಿ ತಂಡವನ್ನು ತೊರೆಯುವ ನಿರ್ಧಾರವನ್ನು ಗ್ಯಾರಿ ತೆಗೆದುಕೊಂಡಿದ್ದರು.

ಭಾರತ ತನ್ನ ಅವಿಭಾಜ್ಯ ಅಂಗ. ಇಲ್ಲಿ ನನಗೆ ತವರಿನ ಅನುಭವವಾಗುತ್ತಿತ್ತು. ಭಾರತವನ್ನು ಬಿಟ್ಟು ಹೋಗಲು ಕಷ್ಟವಾಗುತ್ತಿದೆ. ಆದರೆ ವೈಯಕ್ತಿಕ ಕಾರಣಗಳಿಂದಾಗಿ ವಿದಾಯ ಹೇಳುತ್ತಿದ್ದೇನೆ ಎಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗ್ಯಾರಿ ತಿಳಿಸಿದರು.

ಸ್ಪೆಷಲ್ ತಂಡದ ಅಂಗವಾಗಲು ಸಾಧ್ಯವಾಗಿರುವುದು ನನ್ನ ಪಾಲಿಗೆ ಅದ್ಭುತ ಸಾಧನೆ ಎಂದು ಗ್ಯಾರಿ ಹೇಳಿದರು. ಯಾವುದೇ ಕೋಚಿಂಗ್ ಅನುಭವ ಇಲ್ಲದೆಯೇ ಭಾರತೀಯ ತಂಡದ ತರಬೇತುದಾರನಾಗಿ ನೇಮಕಗೊಂಡಿದ್ದ ಗ್ಯಾರಿ ಅವರು ತಂಡವನ್ನು ಟೆಸ್ಟ್‌ನಲ್ಲಿ ನಂ.1 ಪಟ್ಟಕ್ಕೇರಿಸಿದ್ದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೋಚ್ ಸದ್ಯಕ್ಕಂತೂ ಇತರ ತಂಡಗಳ ಕೋಚಿಂಗ್ ಹುದ್ದೆ ವಹಿಸುವ ಯಾವುದೇ ಇರಾದೆಯಿಲ್ಲ ಎಂದರು. ಕುಟುಂಬದೊಂದಿಗೆ ಹೆಚ್ಚಿನ ಸಮಯ ವ್ಯಯ ಮಾಡಲು ನಾನು ಇಲ್ಲಿಂದ ತೆರಳುತ್ತಿದ್ದೇನೆ ಎಂದವರು ವಿವರಿಸಿದರು.

ಗ್ಯಾರಿ ನೇತೃತ್ವದಲ್ಲಿ ಭಾರತ ಫೀಲ್ಡಿಂಗ್ ಹೊರತುಪಡಿಸಿ ಇತರೆಲ್ಲ ವಿಭಾಗದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿತ್ತು. ಆದರೆ ಕಳೆದ ಕೆಲವು ತಿಂಗಳನಿಂದ ಫೀಲ್ಡಿಂಗ್‌ನಲ್ಲೂ ಚೇತರಿಕೆ ಕಂಡಿದೆ ಎಂದು ಕೋಚ್ ಹೇಳಿದರು.

ಫೀಲ್ಡಿಂಗ್ ಸುಧಾರಣೆ ತರಲು ಕಠಿಣ ಪ್ರಯತ್ನ ಮಾಡಲಾಗಿತ್ತು. ವಿಶ್ವಕಪ‌್‌ನ ಕೊನೆಯ ಮೂರು ಪಂದ್ಯಗಳಲ್ಲಿನ ಫೀಲ್ಡಿಂಗ್ ಅದ್ಭುತವಾಗಿತ್ತು. ಇದು ಉತ್ತಮ ಸಂಕೇತವಾಗಿದೆ ಎಂದರು.

ಭಾರತೀಯ ಯುವ ಆಟಗಾರರ ಬಗ್ಗೆ ಕೋಚ್ ವಿಶೇಷವಾಗಿ ಕೊಂಡಾಡಿದರು. ವಿರಾಟ್ ಕೊಹ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ವಿರಾಟ್ ಉದಯೋನ್ಮುಖ ಪ್ರತಿಭೆ. ಪ್ರಮುಖ ಪಂದ್ಯಗಳಲ್ಲಿಯೂ ಅವರು ಜವಾಬ್ದಾರಿ ಅರಿತು ಆಡಿದ್ದಾರೆ ಎಂದವರು ಸೇರಿಸಿದರು.

ಸುರೇಶ್ ರೈನಾ ಜತೆಗಿನ ಕೆಲಸವನ್ನು ನಾನು ನಿಜಕ್ಕೂ ಆನಂದಿಸಿದ್ದೇನೆ. ಅವರೊಬ್ಬ ಅಸಾಧಾರಣ ಆಟಗಾರ. ಹಾಗೆಯೇ ಚೇತೇಶ್ವರ ಪೂಜಾರ ಅವರ ಪ್ರದರ್ಶನದಿಂದಲೂ ನಾನು ಪ್ರಭಾವಿತನಾಗಿದ್ದೇನೆ. ಅವರಿಗೆ ಟೆಸ್ಟ್‌ನಲ್ಲಿ ಉತ್ತಮ ಭವಿಷ್ಯವಿದೆ. ಪ್ರಗ್ಯಾನ್ ಓಜಾ ಕೂಡಾ ಉತ್ತಮವಾಗಿ ಆಡುತ್ತಿದ್ದು, ಆದರೆ ಇನ್ನು ಸಾಕಷ್ಟು ಕಲಿಯಲಿದೆ. ಎರಡು ಗುಣಮಟ್ಟ ವೇಗಿಗಳು ತಂಡದಲ್ಲಿರಬೇಕಾಗಿರುವುದು ಅಗತ್ಯವಾಗಿದೆ ಎಂದರು.

ಮುನಾಫ್ ಪಟೇಲ್ ಪ್ರದರ್ಶನವೂ ಕೂಡಾ ನನ್ನಲ್ಲಿ ಪರಿಣಾಮ ಬೀರಿದೆ. ಆಶಿಶ್ ನೆಹ್ರಾ ಕೂಡಾ ವಿಶ್ವಕಪ್‌ನಲ್ಲಿ ಅತ್ಯುತ್ತಮವಾಗಿ ಆಡಿದ್ದರು. ಕಳೆದ ಕೆಲವು ವರ್ಷಗಳಿಂದ ಜಹೀರ್ ಖಾನ್ ನಂ.1 ಬೌಲರ್ ಎನಿಸಿಕೊಂಡಿದ್ದು, ಇತರ ವೇಗಿಗಳು ಸಾಥ್ ನೀಡಬೇಕಾಗಿದೆ ಎಂದರು.

ವಿಶ್ವಕಪ್‌ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಯುವರಾಜ್ ಸಿಂಗ್ ಬಗ್ಗೆಯೂ ಕೋಚ್ ಮೆಚ್ಚುಗೆ ವ್ಯಕ್ತಪಡಿಸಿದರು. ಯುವಿ ಬಗ್ಗೆ ನನಗೆ ಹೆಮ್ಮೆಯಿದ್ದು, ಬೌಲಿಂಗ್‌ನಲ್ಲಿ ಪರಿಣಾಮಕಾರಿ ಎನಿಸಿಕೊಳ್ಳಲು ಕಠಿಣ ಶ್ರಮ ವಹಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಭವಿಷ್ಯದಲ್ಲಿಯೂ ಭಾರತಕ್ಕೆ ಆಗಮಿಸುವ ಸೂಚನೆ ನೀಡಿದ ಕರ್ಸ್ಟನ್ ಒಂದು ವೇಳೆ ಮುಂದೊಂದು ದಿನ ಐಪಿಎಲ್ ತಂಡ ಕೋಚ್ ಆಗಲೂ ಬಹುದು ಎಂದರು. ಗ್ಯಾರಿ ಅವರಿಗೆ ಮುಂಬೈ ಇಂಡಿಯನ್ಸ್‌ನಿಂದ ಇದೀಗಲೇ ಕರೆ ಲಭಿಸಿದೆ.

ಇದೇ ಸಂದರ್ಭದಲ್ಲಿಯೂ ಆಟಗಾರರಿಂದ ಲಭಿಸಿರುವ ಅದೇ ಗೌರವವನ್ನು ತನಗೂ ನೀಡಿದ ಅಭಿಮಾನಿಗಳಿಗೆ ಕೋಚ್ ಕೃತಜ್ಞತೆ ಸಲ್ಲಿಸಿದರು. ಇದೊಂದು ಮಹತ್ತರ ಅನುಭವ. ಭಾರತೀಯ ಆಟಗಾರರನ್ನು ನೋಡಿಕೊಂಡ ರೀತಿಯಲ್ಲಿಯೇ ನನ್ನನ್ನು ಗೌರವಿಸಲಾಯಿತು. ಭಾರತೀಯರು ಕ್ರಿಕೆಟನ್ನು ಅಪಾರವಾಗಿ ಪ್ರೀತಿಸುತ್ತಾರೆ. ಇಂದೊಂದು ಸುಂದರ ನಾಡು. ನನಗಿಲ್ಲಿ ಹಲವಾರು ಗೆಳೆಯರಿದ್ದಾರೆ. ಹೀಗಾಗಿ ಇಲ್ಲಿಗೆ ಮತ್ತೆ ಬರುತ್ತೇನೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ