ಸಚಿನ್‌ಗೆ ಶತಕ ಮಿಸ್ ಆದರೂ ಸುರಕ್ಷಿತವಾಗಿ ದಡ ಸೇರಿದ ಭಾರತ

ಬುಧವಾರ, 9 ನವೆಂಬರ್ 2011 (13:18 IST)
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (76) ಮತ್ತು ಕಲಾತ್ಮಕ ವಿವಿಎಸ್ ಲಕ್ಷ್ಮಣ್ (56*) ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಆತಿಥೇಯ ಭಾರತ ತಂಡವು ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಐದು ವಿಕೆಟುಗಳ ಭರ್ಜರಿಯಾಗಿ ಗೆದ್ದುಕೊಂಡಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮಹತ್ವದ ಮುನ್ನಡೆ ದಾಖಲಿಸಿದೆ. 100ನೇ ಅಂತರಾಷ್ಟ್ರೀಯ ಶತಕದ ಹೊಸ್ತಿಲಲ್ಲಿರುವ ಸಚಿನ್ ತೆಂಡೂಲ್ಕರ್ 76 ರನ್ನುಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದರು.

ಗೆಲುವಿಗಾಗಿ ಕೊನೆಯ ಇನ್ನಿಂಗ್ಸ್‌ನಲ್ಲಿ 276 ರನ್ನುಗಳ ಸವಾಲಿನ ಮೊತ್ತವನ್ನು ಬೆನ್ನತ್ತಿದ ಭಾರತ ತಂಡವು ಮೂರನೇ ದಿನದಂತ್ಯಕ್ಕೆ 152ಕ್ಕೆ ಎರಡು ವಿಕೆಟ್ ಕಳೆದುಕೊಂಡಿತ್ತು. ಆದರೆ ಮೂರನೇ ದಿನದ ಆರಂಭದಲ್ಲಿ ರಾಹುಲ್ ದ್ರಾವಿಡ್ (31) ವಿಕೆಟ್ ಕಳೆದುಕೊಂಡ ಭಾರತ ಆಂತಕಕ್ಕೆ ಸಿಲುಕಿತ್ತು.

ಆದರೆ ಚೇತರಿಕೆಯ ಆಟ ಪ್ರದರ್ಶಿಸಿದ ಸಚಿನ್ ಮತ್ತು ಲಕ್ಷ್ಮಣ್ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು. ನಾಲ್ಕನೇ ವಿಕೆಟ್‌ಗೆ 71 ರನ್ನುಗಳ ಜತೆಯಾಟ ನೀಡಿದ ಈ ಜೋಡಿ ಮತ್ತೊಮ್ಮೆ ಭಾರತಕ್ಕೆ ಆಸರೆಯಾದರು.

ಈ ನಡುವೆ 76 ರನ್ ಗಳಿಸಿ ದೇವೇಂದ್ರ ಬಿಶೂ ಬಲೆಗೆ ಸಿಲುಕಿದ ಸಚಿನ್ ಶತಕಗಳ ಶತಕ ಸಾಧನೆಯಿಂದ ಮತ್ತೊಮ್ಮೆ ವಂಚಿತರಾದರು. 200 ನಿಮಿಷಗಳ ಕಾಲ ಕ್ರೀಸಿನಲ್ಲಿ ನೆಲೆಯೂರಿದ ಲಿಟ್ಲ್ ಮಾಸ್ಟರ್ 148 ಎಸೆತಗಳಲ್ಲಿ ಹತ್ತು ಬೌಂಡರಿಗಳ ನೆರವಿನಿಂದ 76 ರನ್ ಗಳಿಸಿದರು.

ಸಚಿನ್ ಉತ್ತಮ ನೆರವು ನೀಡುವ ಮೂಲಕ ಭಾರತದ ಗೆಲುವಿನ ದಟ ದಾಟಿಸಿದ ಲಕ್ಷ್ಮಣ್ ಸಹ ಅರ್ಧಶತಕ ಸಾಧನೆ ಮಾಡಿದರು. 105 ಎಸೆತಗಳಲ್ಲಿ 58 ರನ್ ಗಳಿಸಿ ಅಜೇಯರಾಗುಳಿದ ಲಕ್ಷ್ಮಣ್ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿಗಳು ಸೇರಿದ್ದವು.

ಉಳಿದಂತೆ 18 ರನ್ ಗಳಿಸಿದ್ದ ಯುವರಾಜ್ ಸಿಂಗ್ ಗೆಲುವಿಗೆ ಇನ್ನೇನೂ ಒಂದು ರನ್ ಬೇಕಾಗಿರುವಂತೆಯೇ ವಿಕೆಟ್ ಒಪ್ಪಿಸಿದರು. ನಾಯಕ ಮಹೇಂದ್ರ ಸಿಂಗ್ ಧೋನಿ (0*) ಅಜೇಯರಾಗುಳಿದರು. ಆ ಮೂಲಕ ವಿಂಡೀಸ್ ಒಡ್ಡಿದ 276ರ ಸವಾಲನ್ನು 80.4 ಓವರುಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಭಾರತ ತಲುಪಿತು. ಕೆರೆಬಿಯನ್ ಪರ ಡ್ಯಾರೆನ್ ಸಮ್ಮಿ ಎರಡು ವಿಕೆಟ್ ಕಬಳಿಸಿದರು.

ಇದಕ್ಕೂ ಮೊದಲು ಡೆಬ್ಯುಟ್ ಸ್ಪಿನ್ನರ್ ಆರ್. ಅಶ್ವಿನ್ (47/6) ಮಾರಕ ದಾಳಿಗೆ ತತ್ತರಿಸಿದ್ದ ಪ್ರವಾಸಿಗರ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 95 ರನ್ನುಗಳ ಮಹತ್ವದ ಮುನ್ನಡೆ ಪಡೆದುಕೊಂಡಿದ್ದರ ಹೊರತಾಗಿಯೂ ಎರಡನೇ ಇನ್ನಿಂಗ್ಸ್‌ನಲ್ಲಿ 180 ರನ್ನುಗಳ ಸಾಧಾರಣ ಮೊತ್ತಕ್ಕೆ ಕುಸಿದಿತ್ತು. ಹಾಗೆಯೇ ಪದಾರ್ಪಣಾ ಪಂದ್ಯದಲ್ಲೇ ಐದು ವಿಕೆಟ್ ಸಾಧನೆ ಮಾಡಿರುವ ಅಶ್ವಿನ್ ಅರ್ಹವಾಗಿಯೇ ಪಂದ್ಯ ಪುರುಷೋತ್ತಮ ಎನಿಸಿಕೊಂಡರು.

ವಿಂಡೀಸ್‌ನ 304 ರನ್ನುಗಳಿಗೆ ಉತ್ತರವಾಗಿ ಭಾರತ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 209 ರನ್ನುಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತ್ತು. ಭಾರತದ ಪರ ಪ್ರಗ್ಯಾನ್ ಓಜಾ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟುಗಳ ಸಾಧನೆ ಮಾಡಿದ್ದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಸಂಕ್ಷಿಪ್ತ ಸ್ಕೋರ್ ಪಟ್ಟಿ:

ವೆಸ್ಟ್‌ಇಂಡೀಸ್ ಪ್ರಥಮ ಇನ್ನಿಂಗ್ಸ್- 304 (ಚಂದ್ರಪಾಲ್ 118, ಬ್ರಾತ್‌ವೈಟ್ 63, ಓಜಾ 72/6, ಅಶ್ವಿನ್ 81/3)
ಭಾರತ ಮೊದಲ ಇನ್ನಿಂಗ್ಸ್- 209 (ಸೆಹ್ವಾಗ್- 55, ದ್ರಾವಿಡ್- 54, ಗಂಭೀರ್- 41, ಸಮ್ಮಿ- 35/3)
ವೆಸ್ಟ್‌ಇಂಡೀಸ್ ದ್ವಿತೀಯ ಇನ್ನಿಂಗ್ಸ್- 180 (ಚಂದ್ರಪಾಲ್ 47, ಸಮ್ಮಿ 42, ಅಶ್ವಿನ್ 47/6, ಉಮೇಶ್ 36/2)
ಭಾರತ ಎರಡನೇ ಇನ್ನಿಂಗ್ಸ್- 276/5 (ಸೆಹ್ವಾಗ್- 55, ಸಚಿನ್- 76, ಲಕ್ಷ್ಮಣ್- 58*, ಸಮ್ಮಿ- 56/2)

ಫಲಿತಾಂಶ: ಭಾರತಕ್ಕೆ ಐದು ವಿಕೆಟುಗಳ ಜಯ, ಸರಣಿಯಲ್ಲಿ 1-0 ಮುನ್ನಡೆ
ಪಂದ್ಯಶ್ರೇಷ್ಠ: ರವಿಚಂದ್ರನ್ ಅಶ್ವಿನ್

ವೆಬ್ದುನಿಯಾವನ್ನು ಓದಿ