ಅಜರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು: ಸೌರವ್ ಗಂಗೂಲಿ

ಶನಿವಾರ, 19 ನವೆಂಬರ್ 2011 (10:28 IST)
1996ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಮೋಸದಾಟ ನಡೆದಿದೆ ಎಂಬ ವಿನೋದ್ ಕಾಂಬ್ಳಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಅಜರುದ್ದೀನ್ ತಮ್ಮ ನಿಷ್ಕಳಂತೆ ಹಾಗೂ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕಾಂಬ್ಳಿ ಆರೋಪದಿಂದ ಸೃಷ್ಟಿಯಾಗಿರುವ ನಿಗೂಢತೆಗೆ ಅಂತ್ಯಹಾಡುವ ಸಮಯ ಬಂದಿದೆ. ಈ ನಿಟ್ಟಿನಲ್ಲಿ ಅಜರ್ ತಮ್ಮ ನಿಲುವನ್ನು ವ್ಯಕ್ತಪಡಿಸಬೇಕು. ಇದನ್ನು ಹೇಗೆ ನಿಭಾಯಿಸಬೇಕೆಂಬುದು ಅವರಿಗೆ ಬಿಟ್ಟ ವಿಚಾರ. ಆದರೆ ತಮ್ಮ ನಿಷ್ಕಂಳತೆಯನ್ನು ಅಜರ್ ಸಾಬೀತುಪಡಿಸಬೇಕಾಗಿದೆ ಎಂದು ದಾದಾ ಪ್ರತಿಕ್ರಿಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕಾಂಬ್ಳಿ ಮಾಡಿರುವ ಆರೋಪಕ್ಕೆ ಮಾಜಿ ನಾಯಕ ಟೀಕೆ ಮಾಡಿದ್ದಾರೆ. ಈ ಪಂದ್ಯದಿಂದಾಗಿಯೇ ತಮ್ಮ ಕೆರಿಯರ್ ಅಂತ್ಯವಾಗಿತ್ತು ಎಂಬ ಕಾಂಬ್ಳಿ ಆರೋಪವು ಅಸಂಬದ್ಧವಾಗಿದೆ. ಆ ಪಂದ್ಯದಿಂದಾಗಿ ಅವರ ಅಂತರಾಷ್ಟ್ರೀಯ ಜೀವನ ಅಂತ್ಯಗೊಳ್ಳಲು ಹೇಗೆ ಸಾಧ್ಯ? ಅವರಂತೂ ಅಜೇಯರಾಗುಳಿದಿದ್ದರು ಎಂದು ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೂ ಮೊದಲು ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಲೀಗ್ ಪಂದ್ಯದಲ್ಲಿ 270 ರನ್ ಚೇಸ್ ಮಾಡಿದ್ದ ಶ್ರೀಲಂಕಾ ವಿಜಯಿ ಎನಿಸಿತ್ತು. ಈ ಕಾರಣದಿಂದಲೇ ಭಾರತ ಮಹತ್ವದ ಸೆಮಿಫೈನಲ್‌ನಲ್ಲಿ ಫೀಲ್ಡಿಂಗ್ ತೆಗೆದುಕೊಂಡಿರಬಹುದು ಎಂದು ಗಂಗೂಲಿ ಅನಿಸಿಕೆ ವ್ಯಕ್ತಪಡಿಸಿದರು.

ಅಜರ್ ಬಗ್ಗೆ ನನಗೆ ಅನುಕಂಪವಿದೆ. ಶ್ರೀಲಂಕಾವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದರ ಹಿಂದಿನ ಕಾರಣವನ್ನು ನಾನು ಊಹಿಸಬಲ್ಲೆ. ಇದಕ್ಕೂ ಮೊದಲು ನಡೆದ ಪಂದ್ಯದಲ್ಲೇ ಶ್ರೀಲಂಕಾ 270 ರನ್ನುಗಳ ಗುರಿಯನ್ನು ಚೇಸ್ ಮಾಡಿತ್ತು ಎಂದು ಗಂಗೂಲಿ ವಿವರಿಸಿದ್ದಾರೆ.

ಮತ್ತೊಂದೆಡೆ ಚೊಚ್ಚಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಸಹ ಕಾಂಬ್ಳಿ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಕಳೆದ 15 ವರ್ಷಗಳಲ್ಲಿ ಅವರೇನೂ ನಿದ್ದೆ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಇಂತಹ ಹೇಳಿಕೆಗಳಿಗೆ ಮಾಧ್ಯಮಗಳು ಹೆಚ್ಚಿನ ಮಹತ್ವ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ಗುರುವಾರ ಖಾಸಗಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಾಂಬ್ಳಿ 1996ರ ವಿಶ್ವಕಪ್‌ ಸೆಮಿಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಆರೋಪಿಸಿದ್ದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ