ಕಾಂಬ್ಳಿ ಬಾಂಬ್; ಅಜರ್ ಪರ ಮಾಜಿ ಸಹ ಆಟಗಾರರ ಬ್ಯಾಟಿಂಗ್

ಶನಿವಾರ, 19 ನವೆಂಬರ್ 2011 (12:25 IST)
WD
1996ರಲ್ಲಿ ಕೊಲ್ಕತಾದ ಈಡೆನ್ ಗಾರ್ಡೆನ್ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆಯೆಂಬ ವಿನೋದ್ ಕಾಂಬ್ಳಿ ಗಂಭೀರವಾದ ಆರೋಪವನ್ನು ಮೊಹಮ್ಮದ್ ಅಜರುದ್ದೀನ್ ಸೇರಿದಂತೆ ಮಾಜಿ ಸಹ ಆಟಗಾರರು ತಳ್ಳಿ ಹಾಕಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕಾಂಬ್ಳಿ ಆಪಾದನೆಯ ಬೆನ್ನಲ್ಲೇ ಹೇಳಿಕೆ ಕೊಟ್ಟಿದ್ದ ಅಜರುದ್ದೀನ್, ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದರು. ಇದೀಗ ಅಜರ್ ಬೆಂಬಲಕ್ಕೆ ನಿಂತಿರುವ ಮಾಜಿ ಸಹ ಆಟಗಾರರಾದ ಸಂಜಯ್ ಮಂಜ್ರೇಕರ್, ನಯನ್ ಮೊಂಗಿಯಾ, ವೆಂಕಟಪತಿ ರಾಜು ಮತ್ತು ತಂಡದ ಅಂದಿನ ಮ್ಯಾನೇಜರ್ ಅಜಿತ್ ವಾಡೇಕರ್, ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರವನ್ನು ಒಮ್ಮತದಿಂದ ಅಂಗೀಕರಿಸಲಾಗಿತ್ತು ಎಂದಿದ್ದಾರೆ.

ಕಾಂಬ್ಳಿ ತಪ್ಪಾದ ಆರೋಪ ಮಾಡುತ್ತಿದ್ದಾರೆ. ಇದು ತಂಡದ ಒಮ್ಮತದ ನಿರ್ಧಾರವಾಗಿತ್ತು. ತಂಡಕ್ಕೆ ದ್ರೋಹ ಬಗೆದ ಕಾಂಬ್ಳಿ ಅವರ ಇಂತಹ ಹೇಳಿಕೆಯು ಕೀಳಾದ ಗುಣಮಟ್ಟವನ್ನು ತೋರಿಸುತ್ತಿದೆ ಎಂದು 2000ನೇ ಇಸವಿಯಲ್ಲಿ ಮೋಸದಾಟ ಸಂಬಂಧ ಬಿಸಿಸಿಐನಿಂದ ಅಜೀವ ಶಿಕ್ಷೆಗೆ ಗುರಿಯಾಗಿದ್ದ ಅಜರ್ ತಿಳಿಸಿದ್ದಾರೆ.

ಮ್ಯಾಚ್ ಫಕ್ಸಿಂಗ್ ವಿಚಾರಣೆ ಸಂದರ್ಭದಲ್ಲಿ ಈ ಬಗ್ಗೆ ಸೆಂಟಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಪ್ರಶ್ನೆ ಮಾಡಿತ್ತೇ ಎಂಬುದಕ್ಕೆ ಅಜರ್, ಸದ್ಯ ಪ್ರಕರಣ ಇನ್ನೂ ಹೈಕೋರ್ಟ್‌ನಲ್ಲಿದೆ. ಹೀಗಾಗಿ ಯಾವುದೇ ಹೇಳಿಕೆ ನೀಡಲು ಬಯಸುತ್ತಿಲ್ಲ. ಒಮ್ಮೆ ನಾನು ನಿರಪರಾಧಿ ಎಂದು ತಿಳಿದಾಗ ಎಲ್ಲರೂ ಸತ್ಯಾಂಶವನ್ನು ಅರಿತುಕೊಳ್ಳಲಿದ್ದಾರೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ 1996ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡುವ ನಿರ್ಧಾರ ಬಗ್ಗೆ ತನಗೆ ಯಾವುದೇ ಪಾಪ ಪ್ರಜ್ಞೆ ಕಾಡುತ್ತಿಲ್ಲ ಎಂಬುದನ್ನು ಅಜರ್ ಸ್ಪಷ್ಟಪಡಿಸಿದರು. ಇಂದೊಂದು ತಂಡದ ಸರ್ವಾನುಮತದ ನಿರ್ಧಾರವಾಗಿತ್ತು. ಹೀಗಾಗಿ ನಾನ್ಯಾಕೆ ಬೇಸರಪಟ್ಟುಕೊಳ್ಳಬೇಕು. ಅಲ್ಲದೆ ಸೋಲನ್ನು ತಂಡವು ಒಮ್ಮತದಿಂದ ಒಪ್ಪಿಕೊಂಡಿದೆ. ಇಷ್ಟಾದರೂ ಆಟದಲ್ಲಿ ಸೋಲು ಗೆಲುವು ಸಾಮಾನ್ಯ ಎಂದಿದ್ದಾರೆ.

ಮತ್ತೊಂದೆಡೆ ಕಾಂಬ್ಳಿ ಆರೋಪವನ್ನು ನಿರಾಕರಿಸಿರುವ ಮಾಜಿ ಮ್ಯಾನೇಜರ್ ಅಜಿತ್ ವಾಡೇಕರ್ ಸಹ, ಪಂದ್ಯವನ್ನು ಪ್ರಾಮಾಣಿಕವಾಗಿ ಆಡಲಾಗಿತ್ತು ಎಂದಿದ್ದಾರೆ. ಇದರಲ್ಲಿ ಯಾವುದೇ ಶಂಕೆ ಬೇಡ. ವಿಕೆಟನ್ನು ಅರಿತುಕೊಳ್ಳುವಲ್ಲಿ ನಾವು ಸಂಪೂರ್ಣವಾಗಿ ವಿಫಲರಾದೆವು. ಒಂದು ಹಂತದಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸುವ ಮೂಲಕ ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿದ್ದೆವು ಎಂದಿದ್ದಾರೆ.

ಕಾಂಬ್ಳಿ 15 ವರ್ಷಗಳ ನಂತರ ಯಾಕೆ ಆರೋಪವನ್ನು ಮಾಡುತ್ತಿದ್ದಾರೆ..? ಅವರ ಜತೆ ನಾನು ನಾಲ್ಕು ವರೆ ವರ್ಷ ಜತೆಯಾಗಿ ರಾಷ್ಟ್ರೀಯ ತಂಡದಲ್ಲಿ ಕಳೆದಿದ್ದೇನೆ. ಈ ಸಮಯದಲ್ಲೂ ಜತೆಯಾಗಿ ಡಿನ್ನರ್ ಸಹ ಮಾಡಿದ್ದೇನೆ. ಈ ಅವಧಿಯಲ್ಲಿ ಒಂದು ಸಾರಿಯಾದರೂ ನನ್ನ ಬಳಿ ಶಂಕೆ ವ್ಯಕ್ತಪಡಿಸಿದ್ದರೆ ನಾನಿದರ ಬಗ್ಗೆ ತನಿಖೆ ನಡೆಸುವಂತೆ ಮಂಡಳಿಯಲ್ಲಿ ಕೋರುತ್ತಿದ್ದೆ ಎಂದಿದ್ದಾರೆ.

ಇನ್ನೊಬ್ಬ ಮಾಜಿ ಆಟಗಾರ ಹಾಗೂ ಇದೀಗ ವೀಕ್ಷಣಾ ವಿವರಣೆಗಾರನ ಕರ್ತವ್ಯ ನಿರ್ವಹಿಸುತ್ತಿರುವ ಸಂಜಯ್ ಮಂಜ್ರೇಕರ್ ಸಹ ಇಂದೊಂದು ಪ್ರಮಾಣಿಕ ನಿರ್ಧಾರವಾಗಿತ್ತು ಎಂದಿದ್ದಾರೆ. ಮತ್ತೊಂದೆಡೆ ಕಾಂಬ್ಳಿ ಅನಗತ್ಯ ವಿವಾದಗಳಿಗೆ ಕಿಡಿ ಹೊತ್ತಿಸುತ್ತಿದ್ದಾರೆ ಎಂದು ವೆಂಕಟಪತಿ ರಾಜು ಆಪಾದಿಸಿದ್ದಾರೆ.

ನಯನ್ ಮೊಂಗಿಯಾ ಸಹ ಕಾಂಬ್ಳಿ ಆಪಾದನೆಯನ್ನು ತಳ್ಳಿ ಹಾಕಿದ್ದು, ಇಂತಹ ವಿವಾದಗಳು ಭಾರತೀಯ ಕ್ರಿಕೆಟ್‌ಗೆ ಕೆಟ್ಟದಾಗಿ ಪರಿಣಮಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮಾಜಿ ಆಟಗಾರರಾದ ಅರುಣ್ ಲಾಲ್ ಮತ್ತು ಅತುಲ್ ವಾಸನ್ ಸಹ ಕಾಂಬ್ಳಿ ಹೇಳಿಕೆಯನ್ನು ಟೀಕಿಸಿದ್ದು, ಇಷ್ಟು ವರ್ಷಗಳ ನಂತರ ಯಾಕೆ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ