ಸಿಡಿಯಿತು ಕಾಂಬ್ಳಿ ಬಾಂಬ್; ಎಚ್ಚೆತ್ತ ಕ್ರೀಡಾ ಸಚಿವಾಲಯದಿಂದ ತನಿಖೆ

ಶನಿವಾರ, 19 ನವೆಂಬರ್ 2011 (15:50 IST)
1996ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು 15 ವರ್ಷಗಳ ನಂತರ ಆರೋಪ ಮಾಡುವ ಮೂಲಕ ದೇಶದ ಕ್ರೀಡಾ ಜಗತ್ತಿನಲ್ಲೇ ಭಾರಿ ಕೋಲಾಹಲವನ್ನೇ ಎಬ್ಬಿಸಿದ್ದ ವಿನೋದ್ ಕಾಂಬ್ಳಿ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಕ್ರೀಡಾ ಸಚಿವಾಲಯವು ಪ್ರಕರಣದ ತನಿಖೆಯನ್ನು ಕೈಗೆತ್ತಿಗೊಂಡಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮಾರ್ಚ್ 13, 1996ರಲ್ಲಿ ಶ್ರೀಲಂಕಾ ವಿರುದ್ಧ ಕೊಲ್ಕತಾದ ಈಡೆನ್ ಗಾರ್ಡೆನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೋಸದಾಟ ನಡೆದಿದೆ ಎಂದು ನೆವೆಂಬರ್ 17ರಂದು ಖಾಸಗಿ ಟಿ.ವಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಾಂಬ್ಳಿ ಆಪಾದಿಸಿದ್ದರು. ಅಂದಿನ ಆ ಪಂದ್ಯದಲ್ಲಿ ಟಾಸ್ ಗೆದ್ದಿದ್ದರ ಹೊರತಾಗಿಯೂ ನಾಯಕ ಮೊಹಮ್ಮದ್ ಅಜರುದ್ದೀನ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿರುವ ನಿರ್ಧಾರವು ಈಗಲೂ ಸಂಶಯಕ್ಕೆ ಎಡೆಮಾಡಿವೆ ಎಂದು ಕಾಂಬ್ಳಿ ಭಾವುಕರಾಗಿಯೇ ನುಡಿದಿದ್ದರು.

ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಕ್ರೀಡಾ ಸಚಿವರಾದ ಅಜಯ್ ಮಕೇನ್, ತನಿಖೆಗೆ ಮುಂದಾಗಿದ್ದಾರೆ. ಪ್ರಕರಣವನ್ನು ಲಘುವಾಗಿ ಪರಿಗಣುಸುತ್ತಿಲ್ಲ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಐಸಿಸಿಐ) ಪ್ರಕರಣದ ತನಿಖೆ ಕೈಗೊಳ್ಳಬೇಕು. ಒಂದು ವೇಳೆ ಹಾಗಾಗದಿದ್ದಲ್ಲಿ ನಾವೇ ಖುದ್ದಾಗಿ ತನಿಖೆಗೆ ಮುಂದಾಗಲಿದ್ದೇವೆ ಎಂದಿದ್ದಾರೆ.

ತಂಡದ ಸದಸ್ಯನೊಬ್ಬನೇ ಇಂತಹ ಗಂಭೀರವಾದ ಆರೋಪ ಮಾಡಿದಾಗ ಅದನ್ನು ಕೂಲಂಕುಷವಾಗಿ ತನಿಖೆ ನಡೆಸಬೇಕು. ನಿಜವಾಗಿಯೂ ಏನಾಗಿದೆ ಎಂಬುದನ್ನು ಅರಿಯಲು ದೇಶದ ಜನರಿಗೆ ಹಕ್ಕಿದೆ. ಆರೋಪ ಸುಳ್ಳು ಅಥವಾ ಸರಿಯಾಗಿರಬಹುದು ಆದರೆ ಸತ್ಯಾಂಶ ಅರಿಯುವ ಹಕ್ಕು ಜನರಿಗಿದೆ ಎಂದು ವಿವರಿಸಿದ್ದಾರೆ.

ವಿನೋದ್ ಕಾಂಬ್ಳಿ ಬಗ್ಗೆ ಅನುಕಂಪ ವ್ಯಕ್ತಪಡಿಸಿರುವ ಕ್ರೀಡಾ ಸಚಿವರು, ಒಂದು ವೇಳೆ ಆರೋಪ ನಿಜವಾದ್ದಲ್ಲಿ ಇದು ದೇಶದ ಕ್ರಿಕೆಟ್ ಪಾಲಿಗೆ ದುರದೃಷ್ಟಕರ ಸಂಗತಿ ಎಂದರು.

ಒಟ್ಟಾರೆಯಾಗಿ ಕ್ರಿಕೆಟ್ ಜೀವನದ ನಂತರ ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ಮಾಡಿರುವ ಅಜರುದ್ದೀನ್ ಮೇಲೆ ಇದರಿಂದ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ