ಮತ್ತೆ ಮದ್ಯದಾಟ: ವಿಶ್ವಕಪ್‌ನಿಂದ ಸೈಮಂಡ್ಸ್ ಔಟ್

ಗುರುವಾರ, 4 ಜೂನ್ 2009 (18:56 IST)
PTI
ವಿವಾದಾತ್ಮಕ ಆಸ್ಟ್ರೇಲಿಯನ್ ಆಲ್‌ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಮತ್ತೆ ಸುದ್ದಿಯಲ್ಲಿದ್ದಾರೆ. 'ಮದ್ಯ ಸೇವನೆ ಸಂಬಂಧಿತ' ಪ್ರಕರಣವೊಂದರ ಹಿನ್ನೆಲೆಯಲ್ಲಿ ಓವಲ್‌ನಲ್ಲಿ ತಂಡದ ಪ್ರಾಕ್ಟೀಸ್ ಸೆಶನ್ ತಪ್ಪಿಸಿಕೊಂಡಿದ್ದಕ್ಕಾಗಿ ಐಸಿಸಿ ವಿಶ್ವ ಟ್ವೆಂಟಿ-20 ಕಪ್ ಕೂಟದಿಂದಲೇ ಅವರನ್ನು ಮನೆಗೆ ಕಳುಹಿಸಲಾಗುತ್ತಿದೆ ಎಂದು ಮಾಧ್ಯಮಗಳು ಗುರುವಾರ ವರದಿ ಮಾಡಿವೆ. ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಬಲವಾದ ಹೊಡೆತ ಅನುಭವಿಸುವಂತಾಗಿದೆ.

ಕಳೆದ ಎರಡು ದಿನಗಳಲ್ಲಿ 33ರ ಹರೆಯದ ಸೈಮಂಡ್ಸ್ ಹಲವು ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ. ಇದೀಗ ಅವರನ್ನು ಮರಳಿ ಆಸ್ಟ್ರೇಲಿಯಕ್ಕೆ ಕಳುಹಿಸುವ ಬಗ್ಗೆ 'ಕ್ರಿಕೆಟ್ ಆಸ್ಟ್ರೇಲಿಯಾ' ಕಾರ್ಯನಿರತವಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಸೂತರ್‌ಲ್ಯಾಂಡ್ ತಿಳಿಸಿದ್ದಾರೆ.

ಈ ಹಿಂದೆಯೂ ಅಶಿಸ್ತಿಗಾಗಿ ತಂಡದಿಂದ ಅಮಾನತಿಗೊಳಗಾಗಿದ್ದ ಸೈಮಂಡ್ಸ್ ಕಳೆದ ತಿಂಗಳಷ್ಟೇ ಸಿಎ ಗುತ್ತಿಗೆ ಮರಳಿ ಗಳಿಸಿಕೊಂಡಿದ್ದು, ಅದು ಕೂಡ ಈಗ ಪುನರ್ವಿಮರ್ಶೆಯ ಪರಿಸ್ಥಿತಿಯಲ್ಲಿದೆ ಎಂದು ಸೂತರ್‌ಲ್ಯಾಂಡ್ ಹೇಳಿದ್ದಾರೆ.

ಸೈಮಂಡ್ಸ್ ಕಳೆದ ಐಪಿಎಲ್ ಸರಣಿಯಲ್ಲಿ ಪ್ರಶಸ್ತಿ ವಿಜೇತ ಡೆಕ್ಕನ್ ಚಾರ್ಜರ್ಸ್ ಪರವಾಗಿ ಅತ್ಯುತ್ತಮ ನಿರ್ವಹಣೆ ತೋರಿದ್ದು, ಆಸ್ಟ್ರೇಲಿಯಾ ತಂಡಕ್ಕೆ ಅವರ ಗೈರು ಹಾಜರಿಯು ತೀವ್ರ ಕೊರತೆಯಾಗಲಿದೆ. ಶನಿವಾರ ಮೊದಲ ಪಂದ್ಯದಲ್ಲಿ ರಿಕಿ ಪಾಂಟಿಂಗ್ ಬಳಗವು ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.

ಈ ಶಿಕ್ಷೆಯೊಂದಿಗೆ ಸೈಮಂಡ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನ ಬಹುತೇಕ ಕೊನೆಗೊಂಡಂತಾಗಿದೆ. ಕಳೆದ ತಿಂಗಳು ಘೋಷಿಸಲಾದ ಆಶಸ್ ಸರಣಿಯ ಆಟಗಾರರ ಪಟ್ಟಿಯಲ್ಲಿಯೂ ಸೈಮಂಡ್ಸ್ ಹೆಸರಿರಲಿಲ್ಲ.

ವೆಬ್ದುನಿಯಾವನ್ನು ಓದಿ