'ಬೇಜವಾಬ್ದಾರಿಯುತ ಮಾಧ್ಯಮ', ಬಿಕ್ಕಟ್ಟಿಲ್ಲ: ಧೋನಿ ಕಿಡಿ

ಶುಕ್ರವಾರ, 5 ಜೂನ್ 2009 (19:08 IST)
ತನ್ನ ಮತ್ತು ವೀರೇಂದ್ರ ಸೆಹ್ವಾಗ್ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಮಾಧ್ಯಮ ವರದಿಗಳಿಂದ ಕಿಡಿಕಿಡಿಯಾಗಿರುವ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ತಮ್ಮ ಇಡೀ ತಂಡ ಮತ್ತು ಬೆಂಬಲಿಗ ಸಿಬ್ಬಂದಿಗಳೊಂದಿಗೆ ಪಂದ್ಯಪೂರ್ವ ಪತ್ರಿಕಾಗೋಷ್ಠಿಗೆ ಆಗಮಿಸಿ, 'ತಪ್ಪು ಮತ್ತು ಬೇಜವಾಬ್ದಾರಿಯುತ' ಭಾರತೀಯ ಮಾಧ್ಯಮಗಳ ವಿರುದ್ಧ ಕಿಡಿ ಕಾರಿ, ಬಿಕ್ಕಟ್ಟಿದೆ ಎಂಬುದನ್ನು ನಿರಾಕರಿಸಿದರು.

ನಾವು ಒಗ್ಗಟ್ಟಿನ ತಂಡವಾಗಿ ಟಿ20 ವಿಶ್ವಕಪ್‌ಗೆ ಸಜ್ಜಾಗುತ್ತಿದ್ದೇವೆ. ತಂಡ ಸ್ಫೂರ್ತಿ ಕೂಡ ಎಂದಿನಂತೆಯೇ ಅತ್ಯುನ್ನತ ಮಟ್ಟದಲ್ಲಿದೆ. ಪ್ರತಿಯೊಬ್ಬರೂ ಇನ್ನೊಬ್ಬರನ್ನು ಮೈದಾನದಲ್ಲಾಗಲೀ, ಹೊರಗೇ ಆಗಲಿ, ಪರಸ್ಪರ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಭಾರತದ ಜನತೆ ಮತ್ತು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಾನು ಈ ಮೂಲಕ ಹೇಳಲಿಚ್ಛಿಸುತ್ತೇನೆ ಎಂದು ಧೋನಿ ಹೇಳಿದರು.

ನನ್ನ ಮತ್ತು ಸೇಹ್ವಾಗ್ ನಡುವೆ ಬಿಕ್ಕಟ್ಟಿದೆ ಎಂದು ಇತ್ತೀಚೆಗೆ ಭಾರತೀಯ ಮಾಧ್ಯಮಗಳಲ್ಲಿ ವರದಿಯಾಗಿರುವುದು ಸುಳ್ಳು ಮತ್ತು ಬೇಜವಾಬ್ದಾರಿಯುತ ಪತ್ರಿಕೋದ್ಯಮ ಎಂದು ಧೋನಿ ಟೀಕಿಸಿದರು.

ತಂಡದಲ್ಲಿರುವ ಅದ್ಭುತ ಒಗ್ಗಟ್ಟಿನ ಬಗ್ಗೆ ನಮ್ಮ ಅಭಿಮಾನಿಗಳು, ಬೆಂಬಲಿಗರು ಸಂಪೂರ್ಣ ವಿಶ್ವಾಸ ಇರಿಸಬಹುದು ಎಂದು ಭರವಸೆ ನೀಡಿದ ಅವರು, ನಿಮ್ಮ ಬೆಂಬಲಕ್ಕೆ ನಾವು ಕೃತಜ್ಞರು ಮತ್ತು ಟೂರ್ನಮೆಂಟಿನಲ್ಲಿ ನಿಮ್ಮ ಮನರಂಜಿಸಲು ನಾವು ಎದುರು ನೋಡುತ್ತಿದ್ದೇವೆ. ಪರಿಪೂರ್ಣ ಸಿದ್ಧತೆಗಳೊಂದಿಗೆ ಏಕತೆಯಿಂದ ಟೀಂ ಇಂಡಿಯಾವು ದೃಢ ವಿಶ್ವಾಸದಿಂದ ಆಡಲಿದೆ, ನಮಸ್ಕಾರ ಎಂದು ಹೇಳಿ ಧೋನಿ ಮತ್ತು ಅವರ ಇಡೀ ತಂಡವು ಪತ್ರಿಕಾಗೋಷ್ಠಿಯನ್ನು ದಿಢೀರ್ ಮುಗಿಸಿತು.

ಬೆಚ್ಚಿ ಬಿದ್ದ ಮಾಧ್ಯಮಗಳು, ಐಸಿಸಿಯ ಸಂವಹನಾಧಿಕಾರಿ ಸಮಿ ಉಲ್ ಹಸನ್ ಅವರಿಗೆ ದೂರು ನೀಡಿ, ಇದು ಐಸಿಸಿ ಕಾರ್ಯಕ್ರಮವಾಗಿರುವುದರಿಂದ ಪಂದ್ಯಕ್ಕೆ ಮುನ್ನ ನಾಯಕ ಅಥವಾ ತಂಡದ ಒಬ್ಬ ಸದಸ್ಯ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವುದು ಕಡ್ಡಾಯ ಎಂದು ಹೇಳಿದವು.

ಇದಕ್ಕೆ ಹಸನ್ ಒಪ್ಪಿದರಾದರೂ, ಆದರೆ, ಐಸಿಸಿ ನಿಯಮಾವಳಿ ಪ್ರಕಾರ, ಅವರು ಪತ್ರಿಕಾಗೋಷ್ಠಿಯನ್ನು ಹೇಗೆ ನಡೆಸುತ್ತಾರೆ ಎಂಬ ಬಗ್ಗೆ ಯಾವುದೇ ನಿಯಂತ್ರಣ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

ವೆಬ್ದುನಿಯಾವನ್ನು ಓದಿ