ಧೋನಿ ಪಡೆ ಇತಿಹಾಸ ಪುನರಾವರ್ತಿಸಲಿದೆಯೇ?

ಮಂಗಳವಾರ, 9 ಜೂನ್ 2009 (18:49 IST)
ಟ್ವೆಂಟಿ-20 ವಿಶ್ವಕಪ್ ಸೂಪರ್ ಎಂಟರಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿರುವ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ, ಬುಧವಾರ ನಡೆಯಲಿರುವ 'ಎ' ಗುಂಪಿನ ಕೊನೆಯ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಔಪಚಾರಿಕ ಪಂದ್ಯಗಳನ್ನು ಯಾವತ್ತೂ ಕಳೆದುಕೊಳ್ಳುವ ಮಹೇಂದ್ರ ಸಿಂಗ್ ಧೋನಿ ಪಡೆ ಆ ಹವ್ಯಾಸವನ್ನು ಇಲ್ಲೂ ಮುಂದುವರಿಸಲಿದೆಯೇ?

ಭಾರತ ಕ್ರಿಕೆಟ್ ತಂಡವೀಗ ಸ್ಫೋಟಕ ದಾಂಡಿಗ ವೀರೇಂದ್ರ ಸೆಹ್ವಾಗ್ ಅನುಪಸ್ಥಿತಿ ಹೊರತುಪಡಿಸಿಯೂ ಬೆಟ್ಟದಂತಹ ಗುರಿಗಳನ್ನು ಸುಲಭವಾಗಿ ತಲುಪುವ ಸಾಮರ್ಥ್ಯ ಹೊಂದಿದೆ.

ಆದರೆ ಬೌಲಿಂಗ್ ವಿಭಾಗವು ಆರಂಭ ಮತ್ತು ಅಂತ್ಯದಲ್ಲಿ ಹೆಚ್ಚಿನ ತೊಂದರೆಗೊಳಗಾಗುತ್ತಿರುವುದು ಆತಂಕಕಾರಿ ವಿಚಾರ. ಆರಂಭಿಕ ಆರು ಓವರುಗಳಲ್ಲಿ ಸಾಕಷ್ಟು ರನ್‌ಗಳನ್ನು ಬಿಟ್ಟು ಕೊಡುವ ತಂಡವು, ಕೊನೆಯ ಹಂತದಲ್ಲೂ ಇದೇ ಸಮಸ್ಯೆಯನ್ನು ಎದುರಿಸುತ್ತಿದೆ.

ಇದೆಲ್ಲದರ ಹೊರತಾಗಿಯೂ ಸೂಪರ್ ಎಂಟಕ್ಕೆ ಈಗಾಗಲೇ ಪ್ರವೇಶ ಗಿಟ್ಟಿಸಿಕೊಂಡಿರುವ ಟೀಮ್ ಇಂಡಿಯಾವು ಆರಂಭಿಕ ಗೆಲುವಿನ ವಾತಾವರಣವನ್ನು ಮುಂದುವರಿಸಲಿದೆಯೇ ಎಂಬುದು ಪ್ರಶ್ನೆ. ಯಾಕೆಂದರೆ ಧೋನಿ ಪಡೆ ಔಪಚಾರಿಕ ಪಂದ್ಯಗಳನ್ನು ಕಳೆದುಕೊಳ್ಳುವ ಅಭ್ಯಾಸ ನಾವು ಇತಿಹಾಸವನ್ನು ಗಮನಿಸಿದಾಗ ಕಂಡು ಬರುತ್ತದೆ.

ಅತ್ತ ಐರ್ಲೆಂಡ್ ಸೋಮವಾರದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಸೂಪರ್ ಎಂಟಕ್ಕೆ ಪ್ರವೇಶಿಸಿದೆ. ರೋಚಕ ಗೆಲುವಿನಿಂದ ಉಬ್ಬಿರುವ ಐರ್ಲೆಂಡ್ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವುದಂತೂ ಸತ್ಯ. ಟ್ವೆಂಟಿ-20ಯಲ್ಲಿ ಏನೂ ನಡೆಯಬಹುದಾಗಿರುವುದರಿಂದ ಮತ್ತೊಂದು ಗೆಲುವು ಅವರಿಗೊಲಿದರೆ ಅದೇನೂ ಸಖೇದಾಶ್ಚರ್ಯವೆನಿಸದು.

ಕೆರೆಬಿಯನ್‌ನಲ್ಲಿ ನಡೆದ ತಮ್ಮ ಚೊಚ್ಚಲ 2007ರ ಏಕದಿನ ವಿಶ್ವಕಪ್‌ನಲ್ಲಿ ಐರ್ಲೆಂಡ್ ತಂಡವು ಜಿಂಬಾಬ್ವೆ ವಿರುದ್ಧ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿತ್ತು. ನಂತರದ ಪಂದ್ಯದಲ್ಲಿ ಪಾಕಿಸ್ತಾನವನ್ನು ಐರ್ಲೆಂಡ್ ವಿಶ್ವಕಪ್‌ನಿಂದ ಹೊರ ದಬ್ಬಿತ್ತು. ಅಲ್ಲದೆ ನಂತರ ಸೂಪರ್ ಎಂಟರಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ತನ್ನ ಯಾತ್ರೆಯನ್ನು ಐರ್ಲೆಂಡ್ ಯಶಸ್ವಿಗೊಳಿಸಿತ್ತು.

ಇತ್ತ ಭಾರತವು ಔಪಚಾರಿಕ ಪಂದ್ಯಗಳನ್ನು ಕಳೆದುಕೊಳ್ಳುವ ಹವ್ಯಾಸವನ್ನು ಕಳೆದ ಹಲವು ವರ್ಷಗಳಿಂದ ರೂಢಿಸಿಕೊಂಡು ಬಂದಿದೆ. ಶ್ರೀಲಂಕಾದಲ್ಲಿ ಎರಡೆರಡು ಬಾರಿ ಅಂತಿಮ ಪಂದ್ಯಗಳನ್ನು ಸರಣಿಯಲ್ಲಿ ಕಳೆದುಕೊಂಡದ್ದೇ ಇದಕ್ಕೆ ಉತ್ತಮ ಉದಾಹರಣೆ.

ಕಳೆದ ವರ್ಷ ಏಕದಿನ ಸರಣಿಯಲ್ಲಿ 3-1ರ ಮುನ್ನಡೆಯಲ್ಲಿದ್ದ ಭಾರತವು ಕೊನೆಯ ಪಂದ್ಯವನ್ನು ಶ್ರೀಲಂಕಾದೆದುರು 112 ರನ್ನುಗಳ ಅಂತರದಿಂದ ಕಳೆದುಕೊಳ್ಳುವ ಮೂಲಕ ಗೆಲುವಿನ ಅಂತರವನ್ನು ಕಡಿಮೆ ಮಾಡಿಕೊಂಡಿತ್ತು.

ನಂತರ ಈ ವರ್ಷದ ಫೆಬ್ರವರಿಯಲ್ಲಿ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಅವಕಾಶವಿದ್ದಾಗ್ಯೂ ಕೊನೆಯ ಪಂದ್ಯವನ್ನು 68 ರನ್ನುಗಳ ಅಂತರದಿಂದ ಕಳೆದುಕೊಳ್ಳುವ ಮೂಲಕ 4-1ಕ್ಕೆ ಟೀಮ್ ಇಂಡಿಯಾ ತೃಪ್ತವಾಗಿತ್ತು.

ಇದನ್ನೇ ಮಾರ್ಚ್ ತಿಂಗಳ ನ್ಯೂಜಿಲೆಂಡ್ ಪ್ರವಾಸದಲ್ಲೂ ಟೀಮ್ ಇಂಡಿಯಾ ಪುನರಾವರ್ತಿಸಿತ್ತು. 3-0ಯ ಮುನ್ನಡೆ ಸಾಧಿಸಿದ್ದ ಮಹೇಂದ್ರ ಸಿಂಗ್ ಧೋನಿ ಪಡೆ ಕೊನೆಯ ಪಂದ್ಯದಲ್ಲಿ ಪರಾಜಯ ಹೊಂದಿ ಸರಣಿಯನ್ನು 3-1ರಿಂದ ಗೆದ್ದುಕೊಂಡಿತ್ತು.

ಇವೆಲ್ಲವನ್ನೂ ಬದಿಗಿರಿಸಿ ಐರ್ಲೆಂಡ್ ತಂಡದ ಪ್ರಸಕ್ತ ಸನ್ನಿವೇಶವನ್ನು ಗಮನಿಸಿದಾಗ ನೈಲ್ ಮತ್ತು ಕೆವಿನ್ ಓಬ್ರಿಯಾನ್ ಸಹೋದರರು ಪರಿಸ್ಥಿತಿಯನ್ನು ಬದಲಾಯಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ.

ಸೋಮವಾರದ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಇವರಿಬ್ಬರೂ ಅಮೋಘ ಪ್ರದರ್ಶನ ನೀಡಿದ್ದರು. ನೈಲ್ ಓಬ್ರಿಯಾನ್ 23 ಎಸೆತಗಳಿಂದ 40 ರನ್ ಗಳಿಸಿದ್ದರೆ, ಕೆವಿನ್ ಓಬ್ರಿಯಾನ್ 15 ಎಸೆತಗಳಿಂದ 39 ರನ್ ಚಚ್ಚಿದ್ದರು.

ಬೌಲಿಂಗ್ ವಿಭಾಗದಲ್ಲಿ ಟ್ರೆಂಟ್ ಜಾನ್ಸನ್ ಸಮಯೋಚಿತ ನಿರ್ವಹಣೆಯಿಂದ ಮಿಂಚಬಲ್ಲವರು. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 20ಕ್ಕೆ ಮೂರು ವಿಕೆಟ್ ಕಿತ್ತಿದ್ದರು.

ಇತ್ತಂಡಗಳೂ ಇದುವರೆಗೆ ಮುಖಾಮುಖಿಯಾಗಿರುವುದು ಕೇವಲ ಒಂದು ಬಾರಿ ಮಾತ್ರ. ಎರಡು ವರ್ಷಗಳ ಹಿಂದಿನ ಆ ಪಂದ್ಯವನ್ನು ಭಾರತ ಒಂಬತ್ತು ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು.

ಭಾರತ ತಂಡ: ಗೌತಮ್ ಗಂಭೀರ್, ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ, ಯುವರಾಜ್ ಸಿಂಗ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಹರಭಜನ್ ಸಿಂಗ್, ಇಶಾಂತ್ ಶರ್ಮಾ, ಜಹೀರ್ ಖಾನ್, ಪ್ರವೀಣ್ ಕುಮಾರ್.

ಐರ್ಲೆಂಡ್: ವಿಲಿಯಮ್ ಪೋರ್ಟರ್‌ಫೀಲ್ಡ್, ಆಂಡ್ರೆ ಬೋಥಾ, ಜೆರೆಮಿ ಬ್ರೇ, ಪೀಟರ್ ಓ ಕಾನೆಲ್, ಅಲೆಕ್ಸ್ ಕುಸಾಕ್, ಟ್ರೆಂಟ್ ಜಾನ್ಸನ್, ಕೈಲ್ ಮೆಕ್‌ಕಾಲನ್, ಜಾನ್ ಮೂನೀ, ಕೆವಿನ್ ಓಬ್ರಿಯಾನ್, ನೈಲ್ ಓಬ್ರಿಯಾನ್, ಬಾಯ್ಡ್ ರಾಮ್ಕಿನ್, ಆಂಡ್ರ್ಯೂ ವೈಟ್, ಗ್ಯಾರಿ ವಿಲ್ಸನ್.

ವೆಬ್ದುನಿಯಾವನ್ನು ಓದಿ