ಚಾಂಪಿಯನ್‌ಗಳಿಗೆ ಮುಖಭಂಗ; ವಿಶ್ವಕಪ್‌ನಿಂದ ಔಟ್

ಸೋಮವಾರ, 15 ಜೂನ್ 2009 (08:24 IST)
ಆಘಾತಕಾರಿ ಫಲಿತಾಂಶವೊಂದರಲ್ಲಿ ಹಾಲಿ ಚಾಂಪಿಯನ್ ಭಾರತವು ಟ್ವೆಂಟಿ-20 ವಿಶ್ವಕಪ್‌ನಿಂದ ಇಂಗ್ಲೆಂಡ್‌ನೆದುರು ಸೋಲುಂಡು ಹೊರ ಬಿದ್ದಿದೆ.

ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಮಿಂಚಿದ ಆಂಗ್ಲ ಬೌಲರುಗಳಾದ ಗ್ರೇಮ್ ಸ್ವಾನ್ ಮತ್ತು ರಿಯಾನ್ ಸೈಡ್‌ಬಾಟಮ್ ಆತಿಥೇಯರಿಗೆ ಮೂರು ರನ್‌ಗಳ ಗೆಲುವು ಲಭಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಗೆಲ್ಲಲೇ ಬೇಕಾಗಿದ್ದ ಈ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ವಿಫಲರಾದ ಕಾರಣ ಸೆಮಿಫೈನಲ್ ಆಸೆ ಗಗನ ಕುಸುಮವಾಗಿದೆ. ಭಾರೀ ಭರವಸೆ ಇಟ್ಟಿದ್ದ ಮಹೇಂದ್ರ ಸಿಂಗ್ ಧೋನಿಯ ಹುಡುಗರು ಕೈ ಕೊಟ್ಟಿದ್ದಾರೆ. ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಸೇರಿದಂತೆ ಧೋನಿಯ ಹಲವು ಸ್ವಯಂಕೃತಾಪರಾಧಗಳೂ ಈ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಭಾರತಕ್ಕೆ 154ರ ಗೆಲುವಿನ ಗುರಿ ನೀಡಿತ್ತು. ಬೆನ್ನು ಬಿದ್ದ ಭಾರತ 20 ಓವರುಗಳಲ್ಲಿ 150 ರನ್ ಮಾಡಲಷ್ಟೇ ಶಕ್ತವಾದ ಕಾರಣ ಸೂಪರ್ ಎಂಟರಲ್ಲೇ ತನ್ನ ಆಟವನ್ನು ಅನಿವಾರ್ಯವಾಗಿ ಮುಗಿಸಬೇಕಾಗಿದೆ.

ರೋಚಕತೆಯತ್ತ ಸಾಗುತ್ತಿದ್ದ ಹೊತ್ತಿನಲ್ಲಿ ನಾಯಕ ಧೋನಿ (20 ಎಸೆತಗಳಿಂದ 30 ರನ್) ಮತ್ತು ಯೂಸುಫ್ ಪಠಾಣ್ (17ರಿಂದ 33 ರನ್) ನಡುವಿನ ಆರನೇ ವಿಕೆಟಿನ ಅರ್ಧಶತಕದ ಪಾಲುದಾರಿಕೆಯೂ ಭಾರತವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

ಸ್ವಾನ್ ಮತ್ತು ಸೈಡ್‌ಬಾಟಮ್ ತಲಾ ಎರಡೆರಡು ವಿಕೆಟ್‌ ಪಡೆದು ಪಂದ್ಯವನ್ನು ಇಂಗ್ಲೆಂಡ್‌ನತ್ತ ತಿರುಗಿಸಿದರು. ನಾಲ್ಕು ಓವರುಗಳಲ್ಲಿ 31ಕ್ಕೆ ಎರಡು ವಿಕೆಟ್ ಪಡೆಯುವ ಮೂಲಕ ತಿರುವು ಕೊಟ್ಟ ಸೈಡ್‌ಬಾಟಮ್ ಪಂದ್ಯ ಪುರುಷೋತ್ತಮನೆನಿಸಿದ್ದಾರೆ.

154ರ ಸಾಧಾರಣ ಗುರಿ ಪಡೆದುಕೊಂಡ ಭಾರತಕ್ಕೆ ರೋಹಿತ್ ಶರ್ಮಾ (9) ಮತ್ತು ಸುರೇಶ್ ರೈನಾ (2) ಸಹಕಾರಿಯಾಗಲು ಸೈಡ್‌ಬಾಟಮ್ ಬಿಡಲೇ ಇಲ್ಲ. ಕಂಗೆಟ್ಟ ನೀಲಿ ಹುಡುಗರ ಮೊದಲ ಸಾಲಿಗೆ ಮತ್ತೊಂದು ಆಘಾತವಾದದ್ದು ಗೌತಮ್ ಗಂಭೀರ್ ಕೂಡ ಹೊರಟು ನಿಂತಾಗ. ಅವರು 26 ಎಸೆತಗಳಿಂದ ನಾಲ್ಕು ಬೌಂಡರಿ ಸಹಿತ 26 ರನ್ ಗಳಿಸಿದ್ದರು.

10 ಓವರುಗಳಲ್ಲಿ ಮೂರು ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ 62 ರನ್ ಗಳಿಸಿತ್ತು. ಆಗಲೂ ಪಂದ್ಯ ಕಳೆದುಕೊಳ್ಳುವ ಸ್ಥಿತಿ ಭಾರತಕ್ಕೆದುರಾಗಿರಲಿಲ್ಲ.

ಆದರೆ ನಂತರ ಬೆನ್ನು ಬೆನ್ನಿಗೆ ರವೀಂದ್ರ ಜಡೇಜಾ (25) ಮತ್ತು ಯುವರಾಜ್ ಸಿಂಗ್ (17) ಕೂಡ ಟಿಕೆಟ್ ಪಡೆದುಕೊಂಡರು. ಜೇಮ್ಸ್ ಫೋಸ್ಟರ್ ಯುವಿಯನ್ನು ಸ್ಟಂಪ್ ಮಾಡಿದರೆ ಜಡೇಜಾ ಸ್ವಾನ್‌ಗೆ ಬಲಿಯಾದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್‌‌ ಆರಂಭದಲ್ಲಿ ತನ್ನ ಪ್ರತಾಪವನ್ನು ಮೆರೆದಿತ್ತು. ಕೆವಿನ್ ಪೀಟರ್ಸನ್ ಭಾರತೀಯ ಬೌಲರುಗಳನ್ನು ಮನಸೋಚ್ಛೆ ಥಳಿಸಿದ್ದರು. 27 ಎಸೆತಗಳನ್ನೆದುರಿಸಿದ್ದ ಅವರು ಐದು ಬೌಂಡರಿಗಳೊಂದಿಗೆ ಒಂದು ಸಿಕ್ಸರ್ ಕೂಡ ಚಚ್ಚಿದ್ದರು.

ಆರಂಭಿಕ ಆಟಗಾರ ರವಿ ಬೋಪಾರ 37 ರನ್ ಗಳಿಸಿದ್ದರು. ಇವರಿಬ್ಬರನ್ನೂ ಪೆವಿಲಿಯನ್‌ಗೆ ಕಳುಹಿಸಿ ಟೀಮ್ ಇಂಡಿಯಾ ಪಾಳಯದಲ್ಲಿ ಮುಗುಳ್ನಗು ತಂದವರು ಜಡೇಜಾ.

ಡಿಮಿಟ್ರಿ ಮಸ್ಕರೇನಸ್ (25) ಮತ್ತು ಸ್ಟುವರ್ಟ್ ಬ್ರಾಡ್ (3) ಅಜೇಯರುಳಿದಿದ್ದಾರೆ. ಲ್ಯೂಕ್ ರೈಟ್ (1), ಓವಿಯಸ್ ಶಾ (12), ಪೌಲ್ ಕಾಲಿಂಗ್‌ವುಡ್ (7), ಗ್ರೇಮ್ ಸ್ವಾನ್ (0) ಬೇಗನೆ ವಿಕೆಟ್ ಒಪ್ಪಿಸಿದ್ದರು.

ಒಟ್ಟಾರೆ 20 ಓವರುಗಳಲ್ಲಿ ಇಂಗ್ಲೆಂಡ್ 7 ವಿಕೆಟ್ ಕಳೆದುಕೊಂಡು 153ರ ಸಾಧಾರಣ ಮೊತ್ತ ಗಳಿಸಿತ್ತು.

ಹರಭಜನ್ ಸಿಂಗ್ 30ಕ್ಕೆ ಮೂರು, ಜಡೇಜಾ 26ಕ್ಕೆ ಎರಡು ಹಾಗೂ ಆರ್.ಪಿ. ಸಿಂಗ್, ಜಹೀರ್ ಖಾನ್ ಒಂದೊಂದು ವಿಕೆಟ್ ಕಬಳಿಸಿದ್ದರು.

ಟ್ವೆಂಟಿ-20 ಉದ್ಘಾಟನಾ ಆವೃತ್ತಿಯ ಚಾಂಪಿಯನ್‌ ಟೀಮ್ ಇಂಡಿಯಾ ಈ ಬಾರಿ ನೆಚ್ಚಿನ ತಂಡವೆಂದೇ ಗುರುತಿಸಿಕೊಂಡು ಆಂಗ್ಲರ ನಾಡಿಗೆ ಪ್ರಯಾಣ ಬೆಳೆಸಿತ್ತು. ಆದರೆ ಐರ್ಲೆಂಡ್ ಮತ್ತು ಬಾಂಗ್ಲಾದೇಶ ಹೊರತುಪಡಿಸಿ ಉಳಿದ ತಂಡಗಳ ವಿರುದ್ಧ ಗೆಲುವು ಸಾಧಿಸಲಾಗದೆ ಕಹಿ ನೆನಪುಗಳೊಂದಿಗೆ ತನ್ನ ಪಯಣ ಮುಗಿಸಿದೆ.

ಮುಂದಿನ ಪಂದ್ಯ ದಕ್ಷಿಣ ಆಫ್ರಿಕಾದೊಂದಿಗೆ ಮಂಗಳವಾರ ನಡೆಯಲಿದೆ. ಸೂಪರ್ ಎಂಟರ ಎರಡು ಪಂದ್ಯಗಳಲ್ಲಿ ಭಾರತ ಸೋಲುಂಡಿರುವ ಕಾರಣ ಇದು ಕೇವಲ ಔಪಚಾರಿಕವೆನಿಸಲಿದೆ.

ವೆಬ್ದುನಿಯಾವನ್ನು ಓದಿ