ನ್ಯೂಜಿಲೆಂಡ್‌ ಕನಸು ಭಗ್ನ; ಪಾಕ್, ಲಂಕಾ ಸೆಮಿಫೈನಲ್‌ಗೆ

ಮಂಗಳವಾರ, 16 ಜೂನ್ 2009 (21:15 IST)
ಅಜಂತಾ ಮೆಂಡಿಸ್ ಅದ್ಭುತ ಬೌಲಿಂಗ್ ಹಾಗೂ ತಿಲಕರತ್ನೆ ದಿಲ್‌ಶಾನ್, ಮಹೇಲಾ ಜಯವರ್ಧನೆ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಸೂಪರ್ ಎಂಟರ ಕೊನೆಯ ಪಂದ್ಯವನ್ನು 48 ರನ್ನುಗಳಿಂದ ಗೆದ್ದುಕೊಳ್ಳುವ ಮೂಲಕ ಶ್ರೀಲಂಕಾ ಭರ್ಜರಿಯಾಗಿ ಸೆಮಿಫೈನಲ್ ಪ್ರವೇಶಿಸಿದೆ.

ಈ ಪಂದ್ಯವನ್ನು ಕಳೆದುಕೊಳ್ಳುವ ಮೂಲಕ ನ್ಯೂಜಿಲೆಂಡ್ ಸೆಮಿಫೈನಲ್ ಆಸೆಯೂ ಕಮರಿ ಹೋಯಿತು. 'ಎಫ್' ಗುಂಪಿನಲ್ಲಿ ಎರಡು ಪಂದ್ಯಗಳನ್ನು ಗೆದ್ದುಕೊಂಡಿರುವ ಪಾಕಿಸ್ತಾನ ಸೆಮಿಯಲ್ಲಿ ತನ್ನ ಸ್ಥಾನವನ್ನು ಈ ಮೂಲಕ ಭದ್ರಪಡಿಸಿಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ಐದು ವಿಕೆಟ್ ನಷ್ಟಕ್ಕೆ 158 ರನ್ ಮಾಡಿತ್ತು. ಇದರ ಹಿಂದೆ ಬಿದ್ದ ನ್ಯೂಜಿಲೆಂಡ್ ಕೇವಲ 110 ರನ್ ಮಾಡುವಷ್ಟರಲ್ಲಿ ಸರ್ವಪತನ ಕಂಡಿದೆ.

ಸನತ್ ಜಯಸೂರ್ಯ (0) ಬಂದಷ್ಟೇ ವೇಗದಲ್ಲಿ ಹೊರಟು ಹೋದರೂ ಶ್ರೀಲಂಕಾ ಪರ ತಿಲಕರತ್ನೆ ದಿಲ್‌ಶಾನ್ ಅದ್ಬುತ ಪ್ರದರ್ಶನ ನೀಡುವ ಮೂಲಕ ಭದ್ರ ಬುನಾದಿ ಹಾಕಿದ್ದರು. ಅವರು ಕೇವಲ 37 ಎಸೆತಗಳಿಂದ ಐದು ಬೌಂಡರಿಗಳನ್ನು ಚಚ್ಚುವ ಮೂಲಕ 48 ರನ್ ಗಳಿಸಿದ್ದರು.

ಚಾಮರ ಸಿಲ್ವಾ (13) ಬಹಳ ಹೊತ್ತು ಕ್ರೀಸಿನಲ್ಲಿ ನಿಲ್ಲಲಾಗಲಿಲ್ಲ. ಕುಮಾರ ಸಂಗಕ್ಕರ (35) ಕೂಡ ಅತ್ಯುತ್ತಮ ಆಸರೆ ನೀಡಿದ್ದಾರೆ. ಅವರು ದಿಲ್‌ಶಾನ್ ಜತೆ 62 ಹಾಗೂ ಮಹೇಲಾ ಜಯವರ್ಧನೆಯೊಂದಿಗೆ 50 ರನ್ನುಗಳ ಭಾಗೀದಾರಿಕೆಗೆ ಕಾರಣರಾಗಿದ್ದರು.

ಜಯವರ್ಧನೆ 41ರೊಂದಿಗೆ ಅಜೇಯ. 29 ಎಸೆತಗಳನ್ನೆದುರಿಸಿದ್ದ ಜಯವರ್ಧನೆ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ಎತ್ತಿದ್ದರು.

ಜೆಹಾನ್ ಮುಬಾರಕ್ 8 ರನ್ ಗಳಿಸಿದ್ದರೆ ಅಂಜೆಲೆ ಮ್ಯಾಥ್ಯೂಸ್ 6ರೊಂದಿಗೆ ಅಜೇಯ. ಒಟ್ಟಾರೆ ಐದು ವಿಕೆಟ್ ಕಳೆದುಕೊಂಡಿದ್ದ ಶ್ರೀಲಂಕಾ 158 ರನ್ ದಾಖಲಿಸಿತ್ತು.

ನ್ಯೂಜಿಲೆಂಡ್ ಪರ ಡೇನಿಯಲ್ ವೆಟ್ಟೋರಿ 32ಕ್ಕೆ ಎರಡು ವಿಕೆಟ್ ಪಡೆದರೆ ನಥಾನ್ ಮೆಕಲಮ್, ಕೈಯ್ಲ್ ಮಿಲ್ಸ್, ಇಯಾನ್ ಬಟ್ಲರ್ ತಲಾ ಒಂದೊಂದು ವಿಕೆಟ್ ಕಿತ್ತಿದ್ದರು.

ಸಾಧಾರಣ ಮೊತ್ತವಿದ್ದಾಗ್ಯೂ ನ್ಯೂಜಿಲೆಂಡ್‌ಗೆ ಮಾರ್ಟಿನ್ ಗುಪ್ತಿಲ್ ಹೊರತುಪಡಿಸಿ ಯಾರೊಬ್ಬರೂ ಆಸರೆಯಾಗಲಿಲ್ಲ. ದುರಂತವೆಂದರೆ ಎರಡಂಕಿ ತಲುಪಿದ್ದು ಗುಪ್ತಿಲ್ ಸೇರಿದಂತೆ ಕೇವಲ ಮೂವರು ಮಾತ್ರ.

ನ್ಯೂಜಿಲೆಂಡ್ ದಾಂಡಿಗರು ಗಳಿಸಿದ ಸ್ಕೋರ್ ಗಮನಿಸಿ -- ಆರಂಭಿಕ ಆಟಗಾರ ಬ್ರೆಂಡನ್ ಮೆಕಲಮ್ (10), ಆರೋನ್ ರೆಡ್ಮಂಡ್ (23), ರೋಸ್ ಟೇಲರ್ (8), ಸ್ಕಾಟ್ ಸ್ಟೈರಿಸ್ (2), ಜೇಕಬ್ ಓರಮ್ (7), ಮಾರ್ಟಿನ್ ಗುಪ್ತಿಲ್ (43), ಪೀಟರ್ ಮೆಕ್‌ಗ್ಲಾಸನ್ (2), ನಥಾನ್ ಮೆಕಲಮ್ (2), ಡೇನಿಯಲ್ ವೆಟ್ಟೋರಿ (3), ಕೈಯ್ಲ್ ಮಿಲ್ಸ್ (4), ಇಯಾನ್ ಬಟ್ಲರ್ (2*).

ಗುಪ್ತಿಲ್ ಎದುರಿಸಿದ 34 ಎಸೆತಗಳಿಂದ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ್ದರು. ಅದಾಗಲೇ ಅವರನ್ನು ಪೆವಿಲಿಯನ್ ದಾರಿಗೆ ಹೊರಳಿಸಿದ್ದು ಜಯಸೂರ್ಯ.

ಲಂಕಾ ಪರ ಅಜಂತಾ ಮೆಂಡಿಸ್ ಕೇವಲ 9ಕ್ಕೆ ಮೂರು ವಿಕೆಟ್ ಪಡೆದು ನ್ಯೂಜಿಲೆಂಡ್‌ಗೆ ಮಾರಕವೆನಿಸಿದರೆ ಇಸುರು ಉದಾನ 17ಕ್ಕೆ ಎರಡು ವಿಕೆಟ್ ಕಿತ್ತಿದ್ದರು. ಉಳಿದಂತೆ ಸನತ್ ಜಯಸೂರ್ಯ, ಮುತ್ತಯ್ಯ ಮುರಳೀಧರನ್ ಮತ್ತು ಲಸಿತ್ ಮಾಲಿಂಗ ತಲಾ ಒಂದೊಂದು ವಿಕೆಟ್ ಪಡೆದಿದ್ದರು. ಮೆಂಡಿಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ