ನಿರೀಕ್ಷೆ ಮುಟ್ಟಲಿಲ್ಲ; ಕಳಪೆ ಆಯ್ಕೆಯೇ ಕಾರಣ: ಧೋನಿ

ಬುಧವಾರ, 17 ಜೂನ್ 2009 (11:10 IST)
ಟ್ವೆಂಟಿ-20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸೋಲಿಗೆ ಕಳಪೆ ಆಯ್ಕೆ ನೀತಿಯೇ ಕಾರಣ ಎಂದು ಆರೋಪಿಸಿರುವ ನಾಯಕ ಮಹೇಂದ್ರ ಸಿಂಗ್ ಧೋನಿ, ಗಾಯಾಳು ಆಟಗಾರರನ್ನು ಹೊತ್ತ ಭಾರತಕ್ಕದೇ ಮುಳುವಾಯಿತು; ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದ ಪ್ರದರ್ಶನ ನಮ್ಮಿಂದ ಬರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಾಲಿ ಚಾಂಪಿಯನ್‌ ಭಾರತವು ದಕ್ಷಿಣ ಆಫ್ರಿಕಾ ನೀಡಿದ 131ರ ಗೆಲುವಿನ ಗುರಿಯನ್ನೂ ಮುಟ್ಟಲಾಗದೆ ಸತತ ಮೂರನೇ ಸೋಲನ್ನನುಭವಿಸಿದೆ. ಸೂಪರ್ ಎಂಟರಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲಾಗದ ಭಾರತ ಮತ್ತೆ ವಿಫಲತೆ ಕಂಡಿದ್ದು ಬ್ಯಾಟಿಂಗ್‌ನಲ್ಲಿ.

ಹರಿಣಗಳ ವಿರುದ್ಧ ಪರಾಜಯಕ್ಕೆ ಬ್ಯಾಟ್ಸ್‌ಮನ್‌ಗಳೇ ಜವಾಬ್ದಾರರು ಎಂದಿರುವ ಧೋನಿ, "ಪರಿಸ್ಥಿತಿಯನ್ನು ಸುಖಾಸುಮ್ಮನೆ ಆರೋಪಿಸಲಾಗದು. ಸೋಲಿಗೆ ನಾನು ಸೇರಿದಂತೆ ಕೆಲವು ಆಟಗಾರರ ವಿಫಲತೆಯು ಪ್ರಮುಖ ಕಾರಣವಾಯಿತು" ಎಂದರು.
PTI

"ನಾವು ಆರು ಮಂದಿ ಮುಂಚೂಣಿಯ ದಾಂಡಿಗರು ಹಾಗೂ ಏಳನೇಯವರಾಗಿ ಆಲ್-ರೌಂಡರ್ ಜತೆ ಕಣಕ್ಕಿಳಿದಿದ್ದೆವು. ಅವರಲ್ಲಿ ಮೂರು ಮಂದಿ ಸಂಪೂರ್ಣ ವಿಫಲರಾದಾಗ ಫಲಿತಾಂಶವು ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ಟೂರ್ನಮೆಂಟ್‌ವುದ್ದಕ್ಕೂ ನಮ್ಮ ಬೌಲಿಂಗ್ ಬಹುತೇಕ ಉತ್ತಮವಾಗಿತ್ತು. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ಕೊರತೆಯಾಯಿತು" ಎಂದು ಸೋಲನ್ನು ಅರಗಿಸಿಕೊಳ್ಳುತ್ತಾ ಧೋನಿ ತಿಳಿಸಿದ್ದಾರೆ.

"ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಯಾವತ್ತೂ ಅತ್ಯುತ್ತಮ ಆಟ ನೀಡುತ್ತೇವೆ ಎಂಬುದನ್ನೇ ಪ್ರತಿಯೊಬ್ಬರೂ ಯೋಚಿಸುತ್ತೇವೆ" ಎಂದಿರುವ ಧೋನಿ, "ಇದು ನೀವೇನು ಮಾಡಬಹುದು ಎಂಬುದಕ್ಕಿಂತಲೂ ನೀವೇನು ಮಾಡಬೇಕಿದೆ ಎಂಬ ಪ್ರಶ್ನೆ. ನಾವು ನಿರೀಕ್ಷೆಯ ಪ್ರತಿಶತ ತಲುಪಲಾಗಲಿಲ್ಲ. ನಮ್ಮ ನಿರ್ವಹಣೆಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿರಲಿಲ್ಲ" ಎಂದರು.

"ದುರದೃಷ್ಟಕರವಾಗಿ ನಾವು ಟೂರ್ನಮೆಂಟ್‌ವುದ್ದಕ್ಕೂ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಾಗಲಿಲ್ಲ. ಒಂಬತ್ತು ತಿಂಗಳ ನಂತರ ಮತ್ತೆ ಇದೇ ಆಖಾಡಕ್ಕಿಳಿಯುವಾಗ ನಾವು ಸಂಪೂರ್ಣ ಚೇತರಿಸಿಕೊಂಡಿರುತ್ತೇವೆ ಎಂಬ ಭರವಸೆ ನಮಗಿದೆ" ಎಂದು ಮುಂದಿನ ಟ್ವೆಂಟಿ-20 ವಿಶ್ವಕಪ್‌ ಉದ್ದೇಶಿಸಿ ಆಶಾವಾದ ವ್ಯಕ್ತಪಡಿಸಿದರು.

ಭಾರತೀಯ ತಂಡವು ಕರಾಳರಾತ್ರಿಯಲ್ಲಿದೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದ ನಾಯಕನ ಪ್ರಕಾರ ಕೆಲವು ದಿನಗಳಿಂದ ಮಿಂಚಲು ಸಾಧ್ಯವಾಗಿಲ್ಲ ಎಂದಷ್ಟೇ ಭಾವಿಸಿದ್ದಾರೆ.

"ಈ ಕ್ರಿಕೆಟ್ ಪ್ರಾಕಾರದಲ್ಲಿ ನಿಮ್ಮ ತಂಡ ಯಾವ ಗುಣಮಟ್ಟದ್ದು ಎಂಬುದಕ್ಕಿಂತಲೂ ನಿರ್ದಿಷ್ಟ ದಿನ ನೀವು ಎಲ್ಲಾ ಮೂರು ವಿಭಾಗಗಳಲ್ಲಿ ಹೇಗೆ ಆಡುತ್ತೀರಿ ಎಂಬುದು ಮುಖ್ಯವಾಗುತ್ತದೆ. ಸಂಪೂರ್ಣ 40 ಓವರುಗಳಲ್ಲಿ ನೀವು ತೀಕ್ಷ್ಣರಾಗಿ ಸಕ್ರಿಯರಾಗಿರಬೇಕಾದ ಆಟವಿದು" ಎಂದು ಅವರು ವಿವರಿಸಿದರು.