ಮುಂದುವರಿದ ಧೋನಿ, ಕರ್ಸ್ಟನ್ ಭಿನ್ನ 'ಅಭಿಪ್ರಾಯ'

ಬುಧವಾರ, 17 ಜೂನ್ 2009 (15:45 IST)
ಟ್ವೆಂಟಿ-20 ವಿಶ್ವಕಪ್ ಸೋಲಿಗೆ ಬಳಲಿಕೆ ಒಂದು ಕಾರಣವೇ ಆಗಿರಲಿಲ್ಲ ಎಂದು ಟೀಮ್ ಇಂಡಿಯಾ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಪುನರುಚ್ಛರಿಸುವ ಮೂಲಕ ತರಬೇತುದಾರ ಗ್ಯಾರಿ ಕರ್ಸ್ಟನ್ ಹೇಳಿಕೆಗೆ ಪರೋಕ್ಷ ವಿರೋಧ ವ್ಯಕ್ತಪಡಿಸಿದ್ದು, ಇಬ್ಬರ ಭಿನ್ನ ಹೇಳಿಕೆಗಳು ಮುಂದುವರಿದಿವೆ.

ಅತಿಯಾದ ಕ್ರಿಕೆಟ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಕಾರಣದಿಂದಾಗಿ ಭಾರತ ಸೋಲಬೇಕಾಯಿತು ಎಂದು ಕೋಚ್ ಗ್ಯಾರಿ ಕರ್ಸ್ಟನ್ ಹೇಳಿದ್ದರೆ, ಅತ್ತ ಧೋನಿ ತನ್ನ ಭಿನ್ನ ಹೇಳಿಕೆಯನ್ನು ಮುಂದುವರಿಸಿದ್ದಾರೆ. ಅವರ ಪ್ರಕಾರ ಕೆಲವು ಆಟಗಾರರು 100 ಪ್ರತಿಶತ ದೈಹಿಕ ಕ್ಷಮತೆ ಹೊಂದಿರಲಿಲ್ಲ.

"ನ್ಯೂಜಿಲೆಂಡ್ ಪ್ರವಾಸ ಮಾಡಿದ ಸಂದರ್ಭದಲ್ಲಿದ್ದ ಚೈತನ್ಯ ತಂಡದಲ್ಲಿರಲಿಲ್ಲ. ಇಲ್ಲಿಗೆ ಬಂದಾಗ ನಾವು ಬಹುತೇಕ ಬಳಲಿದ್ದೆವು. ಕಳೆದ ಜನವರಿಯಿಂದ ನಾವು ಎಡೆಬಿಡದೆ ಆಡುತ್ತಿದ್ದೇವೆ. ಅಲ್ಲದೆ ಹಲವು ಕ್ರಿಕೆಟಿಗರು ಸಣ್ಣ-ಪುಟ್ಟ ಗಾಯಗಳೊಂದಿಗೆ ಈ ಟೂರ್ನಮೆಂಟ್‌ಗೆ ಪ್ರಯಾಣ ಬೆಳೆಸಿದ್ದರು. ಬಹುತೇಕ ಆಟಗಾರರು ಗಾಯಾಳುಗಳಾಗಿದ್ದು ಐಪಿಎಲ್‌ನಲ್ಲಿ ಮತ್ತು ಅದೇ ಸಂದರ್ಭದಲ್ಲಿ ನಮಗೆ ಅವರ ಜತೆಗಿನ ಸಂಪರ್ಕವೂ ಕಡಿದು ಹೋಯಿತು" ಎಂದು ಕರ್ಸ್ಟನ್ ವಿಶ್ವಕಪ್ ಸೋಲಿನ ಬಗ್ಗೆ ಮಾತನಾಡುತ್ತಾ ತಿಳಿಸಿದ್ದರು.

ಇದಕ್ಕೆ ಭಿನ್ನ ಹೇಳಿಕೆ ನೀಡಿದ್ದ ಧೋನಿ, ತಂಡ ಆರಂಭದಲ್ಲೇ ಹೊರ ಬೀಳಲು ಕಾರಣ ಬಳಲಿಕೆ ಕಾರಣವಲ್ಲ ಎಂದಿದ್ದರು.

"ಕೆಲವೇ ಕೆಲವು ಮಂದಿ ಮಾತ್ರ ಸಂಪೂರ್ಣ ದೈಹಿಕ ಕ್ಷಮತೆ ಹೊಂದಿದ್ದರು. ಇನ್ನು ಕೆಲವರು ಭುಜ ನೋವಿನ ಗಾಯ, ಹಿಮ್ಮಡಿ ಗಾಯಕ್ಕೊಳಗಾಗಿದ್ದರು. ಹಾಗಾಗಿ ಅವರಿಗೆ ಅಂಗಣದಲ್ಲಿ ಅತ್ಯುತ್ತಮ ನಿರ್ವಹಣೆ ನೀಡಲು ಸಾಧ್ಯವಾಗಿಲ್ಲ. ಆದರೆ ಸೋಲಿಗೆ ಬಳಲಿಕೆ ಕಾರಣವೆನ್ನುವುದರ ಬಗ್ಗೆ ನನಗೆ ಖಚಿತತೆಯಿಲ್ಲ" ಎಂದು ದಕ್ಷಿಣ ಆಫ್ರಿಕಾ ವಿರುದ್ಧ 12 ರನ್ನುಗಳ ಅಂತರದಿಂದ ಸೋಲುಂಡ ನಂತರ ಧೋನಿ ಪ್ರತಿಕ್ರಿಯೆ ನೀಡಿದ್ದಾರೆ.

"ನಾನು ಬಹಳ ಸುಸ್ತಾಗಿದ್ದೇನೆ ಎಂದು ನನಗೆ ಯಾವತ್ತೂ ಅನ್ನಿಸಿಲ್ಲ. ನೀವು 20 ಓವರುಗಳ ಕಾಲ ಆಡುವುದನ್ನು ನಿಭಾಯಿಸಲು ಸಾಧ್ಯವಿಲ್ಲವೇ? ನಾನು ಶ್ರೀಲಂಕಾದಲ್ಲಿದ್ದಾಗ ಬಯಸಿದ ವಿರಾಮದ ಹತ್ತಿರವೂ ಇಲ್ಲಿ ಸುಳಿದಿಲ್ಲ. ಆ ಪ್ರಮಾಣದ ಬಳಲಿಕೆ ನನ್ನನ್ನು ಕಾಡಿಲ್ಲ" ಎಂದು ವಿವರಿಸಿದರು.

ಆಟದ ಎಲ್ಲಾ ಮೂರು ವಿಭಾಗಗಳಲ್ಲಿ ತಂಡವು ಒಗ್ಗಟ್ಟಿನ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಅದರಲ್ಲೂ ಬ್ಯಾಟಿಂಗ್ ವಿಭಾಗವಂತೂ ಸಂಪೂರ್ಣ ನೆಲಕಚ್ಚಿದ ಕಾರಣ ನಿರಾಸೆ ಅನುಭವಿಸಬೇಕಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

"ನಾವು ತಂಡವಾಗಿ ನಿರ್ವಹಣೆ ನೀಡಲೇ ಇಲ್ಲ. ನಾವು 80 ಪ್ರತಿಶತ ತಂಡವಾಗಿ ಪ್ರದರ್ಶನ ನೀಡುತ್ತಿದ್ದೆವು. ಆದರೆ ಇಲ್ಲಿ ನನ್ನ ಪ್ರಕಾರ 60 ಪ್ರತಿಶತವನ್ನೂ ನಾವು ತಲುಪಿಲ್ಲ" ಎಂದರು.

"ನಾನು ಸೇರಿದಂತೆ ಪ್ರಮುಖ ಆಟಗಾರರು ಫಾರ್ಮ್‌ನಲ್ಲಿರಲಿಲ್ಲ. ಬ್ಯಾಟಿಂಗ್‌ಗೆ ಹೆಸರಾಗಿದ್ದ ನಾವು ಅಲ್ಲೇ ಪರದಾಟ ನಡೆಸಿದ್ದು ಹಿನ್ನಡೆಯಾಯಿತು. ಮೂರು ಬೌಲರುಗಳು ಗುರಿ ಮುಟ್ಟಲು ಸಫಲರಾದರೆ ಇತರರು ವೈಫಲ್ಯತೆ ಅನುಭವಿಸುತ್ತಿದ್ದರು. ಕೆಲವು ದಾಂಡಿಗರು ಮಿಂಚಿದರೆ ಉಳಿದವರು ಪರದಾಡುತ್ತಿದ್ದರು. ಕೆಲವರಿಂದ ವೈಯಕ್ತಿಕವಾಗಿ ಉತ್ತಮ ಆಟ ಬಂದಿದ್ದರೂ ಸಹ ತಂಡವಾಗಿ ಅದು ಸಾಧ್ಯವಾಗಲಿಲ್ಲ" ಎಂದು ಧೋನಿ ತಿಳಿಸಿದ್ದಾರೆ.

ಪ್ರಮುಖ ಟೂರ್ನಮೆಂಟ್ ಅಥವಾ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬೇಕೆಂದಿದ್ದಲ್ಲಿ ಆ ಸಂದರ್ಭದ ಐಪಿಎಲ್‌ನಿಂದ ಆಟಗಾರರು ಹೊರಗುಳಿಯಬೇಕು ಎಂಬ ಕರ್ಸ್ಟನ್ ಸಲಹೆಗೆ ಪ್ರತಿಕ್ರಿಯಿಸುತ್ತಾ, "ಯಾರು ಬೇಕಾದರೂ ಹೊರಗುಳಿಯಬಹುದು. ಹಾಗೆ ಮಾಡಲು ಪ್ರತಿಯೊಬ್ಬ ಆಟಗಾರನಿಗೂ ಸ್ವಾತಂತ್ರ್ಯವಿದೆ" ಎಂದರು.

ಧೋನಿಯವರ ಪ್ರಕಾರ ಕ್ರಿಕೆಟ್ ಆಟಗಾರರು ಒಂದು ತಿಂಗಳ ವಿರಾಮ ಪಡೆದಲ್ಲಿ ನಂತರ ಆಟವನ್ನು ಹೆಚ್ಚು ನಿಖರತೆಯಿಂದ ಆಡಬಹುದು.

"ನೀವು ನಿಮ್ಮನ್ನು ರೂಪಿಸಿಕೊಳ್ಳಬೇಕಾದ ಅಗತ್ಯವಿದೆ. ದೈಹಿಕ ಕ್ಷಮತೆಯ ಕಾರಣದಿಂದ ತಂಡದಿಂದ ಒತ್ತಾಯಪೂರ್ವಕವಾಗಿ ಆಟಗಾರರು ಹೊರಗುಳಿಯಬೇಕಾದಾಗ ಅವರು ಮೂರರಿಂದ ಆರು ತಿಂಗಳುಗಳ ಕಾಲ ಹೊರಗುಳಿಯಬೇಕಾಗಬಹುದು. ಅದರ ಬದಲು ಮೂರು ತಿಂಗಳಿಗೊಮ್ಮೆ ಒಂದು ತಿಂಗಳ ವಿಶ್ರಾಂತಿಯನ್ನು ಪಡೆದಲ್ಲಿ ನಿಮಗೆ ನಂತರ ಅತ್ಯುತ್ತಮ ಆಟ ನೀಡಬಹುದಾಗಿದೆ" ಎಂದು ಅಭಿಪ್ರಾಯಪಟ್ಟರು.

ವೆಬ್ದುನಿಯಾವನ್ನು ಓದಿ