ಮೋನಿಕಾ ಪ್ರಕರಣ ಸಿಬಿಐಗೆ ಒಪ್ಪಿಸಲು ಒತ್ತಾಯ

ಸೋಮವಾರ, 11 ಆಗಸ್ಟ್ 2008 (11:03 IST)
PTI
ಮಣಿಪುರದ ಮುಖ್ಯ ಮಂತ್ರಿ ಐಬೋಬಿ ಸಿಂಗ್ ಅವರು ಮೋನಿಕ ದೇವಿ ಉದ್ದೀಪನ ಮದ್ದು ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಿಂಗ್‌ ಅವರು ಮೋನಿಕಾ ಅವರನ್ನು ಬೀಜಿಂಗ್ ಒಲಿಂಪಿಕ್ಸ್‌ನಿಂದ ದೂರವಿಡಲು ಐಒಎ ಮತ್ತು ಎಸ್‌ಎಐಗಳು ಅವರ ವಿರುದ್ಧ 'ದಮನಕಾರಿ ಆಟದಲ್ಲಿ' ತೊಡಗಿವೆ ಎಂದು ಆಪಾದಿಸಿದ್ದಾರೆ.

"ಈ ಇಡಿಯ ಪ್ರಕರಣ ಎಸ್‌ಎಐ, ರಾಷ್ಟ್ರೀಯ ಉದ್ದೀಪನ ಔಷಧಿ ಪರೀಕ್ಷಾ ಪ್ರಯೋಗಲಯ ಮತ್ತು ಐಒಎಗಳು ಮೋನಿಕ ವಿರುದ್ಧ ಹೂಡಿರುವ ಷಡ್ಯಂತ್ರವಾಗಿ ಗೋಚರಿಸುತ್ತಿದೆ. ಇದರಿಂದ ಕ್ರೀಡಾಪಟುವೊಬ್ಬರ ಒಲಿಂಪಿಕ್ಸ್ ಕನಸು ಭಗ್ನಗೊಂಡಿದೆ" ಎಂದು ಸಿಂಗ್ ಹೇಳಿದ್ದಾರೆ.

ಆಯ್ಕೆ ಸಮಿತಿಯ ಮುಖ್ಯಸ್ಥರಿಂದ ಮೋನಿಕಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಸಾಧ್ಯವಿಲ್ಲ ಎಂದು ಘೋಷಸಿದ ನಂತರ ಸಿಂಗ್‌ರಿಂದ ಈ ಪ್ರತಿಕ್ರಿಯೆ ಹೊರಬಿದ್ದಿದೆ.

ಅಂತಾರಾಷ್ಟ್ರೀಯ ನಿಯಮದಂತೆ, ಮೋನಿಕ ಬೀಜಿಂಗ್‌ಗೆ ಹೊರಡುವ ಕನಿಷ್ಟ 72 ಗಂಟೆಗಳ ಮುನ್ನ ಉದ್ದೀಪನ ಔಷಧಿ ಪರೀಕ್ಷೆಯ ವರದಿಯನ್ನು ಬಹಿರಂಗಗೊಳಿಸಬೇಕಾಗಿತ್ತು ಆದರೆ ಎಸ್‌ಎಐ, ಭಾರತೀಯ ವೈಟ್‌ ಲಿಫ್ಟಿಂಗ್ ಫೆಡರೇಶನ್‌ಗೆ ಮಧ್ಯಾಹ್ನ 12.30ರ ವೇಳೆಗೆ ವರದಿಯನ್ನು ನೀಡಿತ್ತು. ಆದರೆ, ಮುಂಜಾನೆ 3.30ರ ವೇಳೆಗೆ ಮೋನಿಕಾ ಬೀಜಿಂಗ್‌ಗೆ ಹೊರಡಬೇಕಿತ್ತು.

"ಭಾರತ ಕ್ರೀಡಾ ವಿಭಾಗದ ಅತ್ಯುನ್ನತ ಆಧಿಕಾರ ಹೊಂದಿರುವ ಎಸ್‌ಎಐ ಮೋನಿಕಾರ ಭವಿಷ್ಯಕ್ಕೆ ದೊಡ್ಡ ನಷ್ಟವನ್ನುಂಟುಮಾಡಿದೆ, ಅಂತಾರಾಷ್ಟ್ರೀಯ ಮಟ್ಟದಕ್ರೀಡಾಳುವೊಬ್ಬರಿಗೆ ಪೂರ್ವ ಯೋಜಿತ ಉದ್ದೇಶದೊಂದಿಗೆ ಅನ್ಯಾಯ ಮಾಡಲಾಗಿದೆ" ಎಂದೂ ಸಿಂಗ್ ಸೇರಿಸಿದರು.

ಮೋನಿಕಾರಿಂದಲೂ ಸಿಬಿಐ ತನಿಖೆಗೆ ಒತ್ತಾಯ
ತಮ್ಮ ಸಹ ಕ್ರೀಡಾಪಟುಗಳ ಮೇಲೆ ಅರೋಪ ಹೊರಿಸಿರುವ ಮೋನಿಕಾ ದೇವಿ ಸಹ ಎಸ್ಐ ಮತ್ತು ಐಒಎಗಳ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ