ಟೈಗರ್ ವುಡ್ಸ್ ಪ್ರಾಯೋಕತ್ವಕ್ಕೆ ಕುತ್ತು

ಗುರುವಾರ, 27 ನವೆಂಬರ್ 2008 (14:44 IST)
ಆರ್ಥಿಕ ಸಂಕಷ್ಟದ ಕಾರಣದಿಂದ ಜಿಎಂ ಮೋಟಾರ್ಸ್ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಅವರೊಂದಿಗಿನ ಪ್ರಾಯೋಜಕತ್ವ ಒಪ್ಪಂದವನ್ನು ಮುರಿದುಕೊಂಡಿದೆ. ಹಣಕಾಸಿನ ತೊಂದರೆ ಮತ್ತು ಆಟಗಾರನಿಗೆ ಖಾಸಗಿಯಾಗಿ ಕಳೆಯಲು ಇನ್ನಷ್ಟು ಸಮಯದ ಅವಶ್ಯಕತೆಯಿರುವುದರಿಂದ ಇನ್ನೂ ಒಂದು ವರ್ಷ ಮುಂದುವರಿಯಬೇಕಿದ್ದ ಒಪ್ಪಂದವನ್ನು ಈ ವರ್ಷವೇ ಮುಗಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಜನರಲ್ ಮೋಟಾರ್ಸ್ ಕಳೆದ ಹತ್ತು ವರ್ಷಗಳಿಂದ ಗಾಲ್ಫ್ ಆಟಗಾರ ಟೈಗರ್ ವುಡ್ಸ್‌ಗೆ ಸುಮಾರು 10 ದಶಲಕ್ಷ ಡಾಲರ್ ಪ್ರಾಯೋಜಕತ್ವದ ಹಣ ನೀಡುತ್ತಿತ್ತು. ಹೆಚ್ಚಿರುವ ಸಾಲದಿಂದಾಗ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕಂಪನಿಯನ್ನು ಪಾರು ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ವಿಶ್ವದ ನಂಬರ್ ವನ್ ಗಾಲ್ಫ್ ಆಟಗಾರ ಹಾಗೂ ನಂಬರ್ ವನ್ ಗಳಿಕೆಯ ಆಟಗಾರ ಎಂಬ ಹೆಗ್ಗಳಿಕೆ ಟೈಗರ್ ವುಡ್ಸ್ ಪಾಲಿಗಿದೆ.

"ಟೈಗರ್ ವುಡ್ಸ್‌ರವರು ಜನರಲ್ ಮೋಟಾರ್ಸ್‌ನ ಅತ್ಯುತ್ತಮ ಗೆಳೆಯ ಮತ್ತು ನಮ್ಮ ಹೊಸ ಉತ್ಪಾದನೆಗಳಿಗೆ ಸಾಕಷ್ಟು ಪ್ರಚಾರ ನೀಡಿ ನಮ್ಮ ಪಾಲಿನ ಆಸ್ತಿಯಾಗಿದ್ದಾರೆ" ಎಂದು ಕಂಪನಿಯ ಮಾರಾಟ ವಿಭಾಗದ ಉಪಾಧ್ಯಕ್ಷ ಮಾರ್ಕ್ ಲಾನೆವೆ ತಿಳಿಸಿದ್ದಾರೆ.

"ಇದುವರೆಗಿನ ದೀರ್ಘಕಾಲದ ಒಪ್ಪಂದದ ಬಗ್ಗೆ ನನಗೆ ಹೆಮ್ಮೆಯೆನಿಸುತ್ತಿದೆ ಮತ್ತು ನಾನು ಅವರಿಗೆ ಆಭಾರಿಯಾಗಿದ್ದೇನೆ. ನಾನು ಕಂಪನಿಯ ಜತೆ ಇದ್ದಷ್ಟು ದಿನ ಸಂತೋಷವಾಗಿಯೇ ಕಾಲ ಕಳೆದಿದ್ದೇನೆ. ಆರ್ಥಿಕ ಸಂಕಷ್ಟ ಮತ್ತು ನನಗೆ ವೈಯಕ್ತಿಕವಾಗಿ ಇನ್ನೊಂದು ಮಗು ಬೇಕೆಂಬ ಆಸೆಯಿರುವುದರಿಂದ ಕುಟುಂಬದ ಜತೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಿದ್ದೇನೆ" ಎಂದು ಟೈಗರ್ ಪ್ರತಿಕ್ರಿಯೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ