ಕೊಲ್ಕತ್ತಾದಲ್ಲಿ ಡಿಯೆಗೊ ಮರಡೋನಾ

ಶನಿವಾರ, 6 ಡಿಸೆಂಬರ್ 2008 (13:03 IST)
ಶನಿವಾರ ಮಧ್ಯರಾತ್ರಿ ಫುಟ್ಬಾಲ್ ದಂತಕತೆ, ಅರ್ಜೆಂಟೈನಾದ ಕೋಚ್ ಡಿಯೆಗೊ ಮರಡೋನಾ ಕೊಲ್ಕತ್ತಾಕ್ಕೆ ಬಂದಿದ್ದು, ಸಾವಿರಾರು ಅಭಿಮಾನಿಗಳು ಅವರನ್ನು ವಿಮಾನ ನಿಲ್ದಾಣದಿಂದ ಸ್ವಾಗತಿಸಿದರು.

ತನ್ನ ಗೆಳತಿ ವೆರೊನಿಕಾ ಜತೆ ರಾತ್ರಿ 1.25ಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಜಗತ್‌ಪ್ರಸಿದ್ಧ ಫುಟ್ಬಾಲ್ ತಾರೆ ಡಿಯೆಗೊ ಮರಡೋನಾ ಎರಡು ದಿನ ಕೊಲ್ಕತ್ತಾದಲ್ಲೇ ಇರುತ್ತಾರೆ. ಇಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಅವರು ನಂತರ ತವರಿಗೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.

ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ನಗರದ ರಸ್ತೆಗಳಲ್ಲಿ ಸಾಲುಗಟ್ಟಿ ನಿಂತು ಮರಡೋನಾ ಅವರನ್ನು ಸ್ವಾಗತಿಸಿದರು. ಹಲವರು ತಮ್ಮ ಟೀವಿಗಳೆದುರು ಕುಳಿತು ಫುಟ್ಬಾಲ್ ತಾರೆಯ ಭಾರತಾಗಮನವನ್ನು ವೀಕ್ಷಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ವಿಮಾನ ನಿಲ್ದಾಣದಿಂದ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಬಸ್‌ನಲ್ಲಿ ಮರಡೋನಾ ತನ್ನ ಗೆಳತಿ ವೆರೊನಿಕಾ ಅವರೊಂದಿಗೆ ಹೊರಟರು. ಪಾರದರ್ಶಕ ಕಿಟಕಿಗಳನ್ನು ಆ ಬಸ್ ಹೊಂದಿದ್ದು ಫುಟ್ಬಾಲ್ ತಾರೆಯ ಚಲನವಲನಗಳನ್ನು ಅಭಿಮಾನಿಗಳು ನೋಡುವಂತೆ ವಿನ್ಯಾಸ ಮಾಡಲಾಗಿತ್ತು. ಹಲವೆಡೆ ಮರಡೋನಾ ಅವರ ಕಟೌಟು ಮತ್ತು ಪೋಸ್ಟರುಗಳನ್ನು ಸ್ಥಾಪಿಸಿ ಸ್ವಾಗತ ಕೋರಲಾಗಿತ್ತು. ಇಂಗ್ಲೀಷ್, ಹಿಂದಿ, ಬೆಂಗಾಲಿ ಹಾಗೂ ಸ್ಪಾನಿಷ್ ಭಾಷೆಗಳಲ್ಲಿ ಬರೆದ ಬ್ಯಾನರುಗಳು ಬೀದಿ ಬೀದಿಗಳಲ್ಲಿ ರಾರಾಜಿಸುತ್ತಿದ್ದವು.

ಇಂದು ಸಂಜೆ ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಮರಡೋನಾ ಅವರನ್ನು ಸನ್ಮಾನಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಹಿರಿಯ ಕಮ್ಯೂನಿಸ್ಟ್ ಮುಖಂಡ ಜ್ಯೋತಿ ಬಸು ಭಾಗವಹಿಸಲಿದ್ದು, ಭಾರೀ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ತುರ್ತು ರಕ್ಷಣಾ ದಳ, ಕಮಾಂಡೋಗಳು ಸೇರಿದಂತೆ ಸುಮಾರು ಐದು ಸಾವಿರ ಪೊಲೀಸರು ಮರಡೋನಾ ಅವರ ರಕ್ಷಣೆಗಾಗಿ ನೇಮಿಸಲ್ಪಟ್ಟಿದ್ದು, ಕೊಲ್ಕತ್ತದಾದ್ಯಂತ ಭಾರೀ ಭದ್ರತೆ ಏರ್ಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ