ಸಾನಿಯಾರಿಂದ ಏಷಿಯಾ ಪೆಸಿಪಿಕ್ 2-0 ಮುನ್ನಡೆ

ಶನಿವಾರ, 10 ಜನವರಿ 2009 (14:57 IST)
ವಿಶ್ವ ಟೆನಿಸ್ ರ‌್ಯಾಂಕಿಂಗ್‌ನ ನಂ. 25 ಹಂಗೇರಿ ಆಟಗಾರ್ತಿ ಆಗ್ನೆಸ್ ಸ್ಜಾವೇಯವರನ್ನು ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ನೇರ ಸೆಟ್‌ಗಳಿಂದ ಮಣಿಸಿದ್ದಾರೆ. ಆ ಮ‌ೂಲಕ ಇಲ್ಲಿ ನಡೆಯುತ್ತಿರುವ ವಿಶ್ವ ತಂಡಗಳ ಚಾಲೆಂಜ್ ಚಾಂಪಿಯನ್‌ಶಿಪ್ ಟೂರ್ನಮೆಂಟಿನಲ್ಲಿ ಯ‌ೂರೋಪ್ ತಂಡದ ವಿರುದ್ಧ ಏಷಿಯಾ ಫೆಸಿಪಿಕ್ ತಂಡ ಸಿಲ್ವರ್ ಗುಂಪಿನಲ್ಲಿ 2-0 ಮುನ್ನಡೆ ಸಾಧಿಸಿದೆ.

ವಿಶ್ವದ ನಂ. 100 ಸಾನಿಯಾ ಗಾಯಾಳುವಾಗಿ ಹಲವಾರು ಸಮಯದಿಂದ ಟೆನಿಸ್‌ನಿಂದ ದೂರವೇ ಉಳಿದಿದ್ದರು. ಇದೀಗ ಯ‌ೂರೋಪ್ ತಂಡದ ಆಟಗಾರ್ತಿ ಆಗ್ನೆಸ್‌ರನ್ನು 6-3, 6-4ರಿಂದ ಸೋಲಿಸಿ ತಂಡಕ್ಕೆ ಆಸರೆಯಾಗಿ ನಿಂತರು.

ಇದಕ್ಕೂ ಮೊದಲು ಡಬಲ್ಸ್ ವಿಭಾಗದಲ್ಲಿ ಯ‌ೂರೋಪ್ ತಂಡದ ನಾಯಕಿ, ವಿಶ್ವದ ನಂ.1 ಸಿಂಗಲ್ಸ್ ಆಟಗಾರ್ತಿ ಸೆರ್ಬಿಯಾದ ಜೆಲೆನಾ ಜಾಂಕೊವಿಕ್ ಮತ್ತು ಪೋರ್ಚುಗಲ್‌ನ ಮೈಕೆಲ್ ಲಾರ್ಚರ್ ಡಿ ಬ್ರಿಟೋರವರನ್ನು 6-1, 6-1ರಿಂದ ಚೀನಾದ ಝೆಂಗ್ ಲೀಯವರ ಜತೆ ಸೇರಿ ಸಾನಿಯಾ ಮಣಿಸಿದ್ದರು.

ಇದರಿಂದಾಗಿ ಏಷಿಯಾ ಪೆಸಿಪಿಕ್ ತಂಡ 2-0 ಮುನ್ನಡೆ ಕಾಯ್ದುಕೊಂಡಿದೆ.

ಗೋಲ್ಡ್ ಗುಂಪಿನ ಫೈನಲ್ ತಲುಪಲು ವಿಫಲವಾಗಿದ್ದ ಏಷಿಯಾ ಫೆಸಿಪಿಕ್ ತಂಡ ಟೀಮ್ ರಷ್ಯಾದೆದುರು ಸೋಲೊಪ್ಪಿಕೊಂಡಿತ್ತು. ಚೀನಾ ಆಟಗಾರ್ತಿ ಝೆಂಗ್ ಜೀಯವರನ್ನು ರಷ್ಯಾ ತಂಡದ ವಿರಾ ಝ್ವನರೆವಾ 7-6(3), 6-4ರಿಂದ ಹಾಗೂ ಸಾನಿಯಾ ತನ್ನ ಎದುರಾಳಿ ರಷ್ಯನ್ ಅನಾ ಚಕ್ವೇತದ್ಜೇ 6-4, 6-4ರಿಂದ ಸೋಲೊಪ್ಪಿಕೊಂಡಿದ್ದರಿಂದ 0-2ಯಿಂದ ತಂಡ ಪರಾಜಯಗೊಂಡಿತ್ತು.

ವೆಬ್ದುನಿಯಾವನ್ನು ಓದಿ