ಸ್ಲೋವೇಕಿಯಾದ ಡೇನಿಯೇಲಾ ಹಂಟುಚೋವಾ ಮತ್ತು ಜುಪಾನ್‌ನ ಆಯಿ ಸುಗಿಯಾಮಾರನ್ನು ಆಸ್ಟ್ರೇಲಿಯಾ ಓಪನ್ ಫೈನಲ್‌ನಲ್ಲಿ ಮಣಿಸಿದ ಅಮೆರಿಕನ್ ಸಹೋದರಿಯರಾದ ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ಆಸ್ಟ್ರೇಲಿಯಾ ಓಪನ್ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಇದು ಸಹೋದರಿಯರ 8ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿಯಾಗಿದ್ದು, ಈ ಹಿಂದೆ 2001 ಮತ್ತು 2003ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದುಕೊಂಡಿದ್ದರು. 1999ರಲ್ಲಿ ಫ್ರೆಂಚ್ ಓಪನ್ ಮತ್ತು 2000, 2002, 2008ರಲ್ಲಿ ವಿಂಬಲ್ಡನ್ ಹಾಗೂ 1999ರಲ್ಲಿ ಯು.ಎಸ್. ಓಪನ್ ಗೆದ್ದುಕೊಂಡ ಖ್ಯಾತಿ ಈ ಸಹೋದರಿಯರದ್ದು.
ಎದುರಾಳಿಗಳಾದ ಸ್ಲೋವೇಕಿಯಾದ ಡೇನಿಯೇಲಾ ಹಂಟುಚೋವಾ ಮತ್ತು ಜುಪಾನ್‌ನ ಆಯಿ ಸುಗಿಯಾಮಾರನ್ನು 6-3, 6-3ರ ಅಂತರದಿಂದ ಶುಕ್ರವಾರ 76 ನಿಮಿಷಗಳ ಕಾಲ ನಡೆದ ಹೋರಾಟದ ಫೈನಲ್‌ನಲ್ಲಿ ಸೋಲಿಸಿದ ವಿಲಿಯಮ್ಸ್ ಸಹೋದರಿಯರು ತಮ್ಮ ಮೂರನೇ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಪ್ರಶಸ್ತಿ ಪಡೆದುಕೊಂಡರು.
10ನೇ ಶ್ರೇಯಾಂಕದ ವಿಲಿಯಮ್ಸ್ ಸಹೋದರಿಯರು ಮೊದಲ ಸೆಟ್‌ನಲ್ಲಿ 38 ನಿಮಿಷಗಳ ಕಾಲ ಹೋರಾಡಿ ಗೆಲುವು ತಂದುಕೊಂಡರು. ಎರಡನೇ ಸೆಟ್‌ನಲ್ಲಿ ಕೂಡ ಪ್ರಬಲ ಹೊಡೆತಗಳಿಂದ ಎದುರಾಳಿಗಳನ್ನು ಮಣಿಸಿದ ಸೋದರಿಯರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ವೀನಸ್ ಮತ್ತು ಸೆರೆನಾ ಪ್ರಶಸ್ತಿ ಗೆದ್ದುಕೊಂಡದ್ದರಿಂದ 300 ಸಾವಿರ ಡಾಲರ್ ಬಹುಮಾನ ಪಡೆದುಕೊಳ್ಳಲಿದ್ದಾರೆ.
ಶನಿವಾರ ನಡೆಯಲಿರುವ ಸಿಂಗಲ್ಸ್ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ರವರು ರಷ್ಯಾದ ದಿನಾರಾ ಸಫಿನಾ ವಿರುದ್ಧ ಮುಖಾಮುಖಿಯಾಗಲಿದ್ದು, ಗೆದ್ದುಕೊಂಡಲ್ಲಿ ಅವರಿಗದು 10ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿಯಾಗಲಿದೆ.