ಸಿಂಗಲ್ಸ್ ಪಂದ್ಯಗಳಿಗೆ ತಾನು ಹೆಚ್ಚು ಪ್ರಾಧಾನ್ಯತೆ ಕೊಡುವುದಾಗಿ ಹೇಳಿರುವ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ, ತನ್ನ ಸಿಂಗಲ್ಸ್ ಕ್ರೀಡಾಜೀವನವನ್ನು ದೀರ್ಘಕಾಲ ಕಾಪಾಡಿಕೊಳ್ಳುವ ಸಲುವಾಗಿ ಡಬಲ್ಸ್ ಪಂದ್ಯಗಳಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ.
"ನನಗೆ ಸಿಂಗಲ್ಸ್ ಪಂದ್ಯಗಳು ಮುಖ್ಯ. ನಾನಿನ್ನೂ ಎಳೆಯ ಪ್ರಾಯದವಳಾಗಿರುವುದರಿಂದ ಸಿಂಗಲ್ಸ್‌ನಲ್ಲಿ ನನ್ನ ದೇಹ ಸ್ಪಂದಿಸುವಷ್ಟು ಕಾಲ ಆಡುವುದು ಅಗತ್ಯವಿದೆ. ಸಿಂಗಲ್ಸ್‌ನಲ್ಲಿ ನಾನು ಉತ್ತಮವಾಗಿ ಆಡುತ್ತಿದ್ದೇನೆ. ಹಾಗಾಗಿ ಸಿಂಗಲ್ಸ್ ಮತ್ತು ಡಬಲ್ಸ್‌ಗಳ ನಡುವೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇನೆ. ಹಾಗಾಗಿ ಕೆಲವು ಡಬಲ್ಸ್ ಪಂದ್ಯಗಳಿಂದ ತಾಯ್ನೆಲ ಮತ್ತು ವಿದೇಶಗಳಲ್ಲಿ ಆಡದೇ ಹೊರಗುಳಿಯಲಿದ್ದೇನೆ" ಎಂದು ಕಂಪನಿಯೊಂದರ ಪ್ರಚಾರಕ್ಕಾಗಿ ಇಲ್ಲಿಗೆ ಆಗಮಿಸಿದ್ದ ಸಾನಿಯಾ ತಿಳಿಸಿದರು.
ಈ 22ರ ಹೈದರಾಬಾದ್ ಚೆಲುವೆ ಇತ್ತೀಚೆಗಷ್ಟೇ ಮಹೇಶ್ ಭೂಪತಿ ಜತೆಗೂಡಿ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ವಿಭಾಗದ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿದ್ದರು. ನಂತರ ಪಟ್ಟಾಯ ಓಪನ್ ಸಿಂಗಲ್ಸ್‌ನಲ್ಲಿ ಫೈನಲ್ ಏರಿ ರನ್ನರ್ ಅಪ್ ಆಗಿದ್ದರು. ಇದೆಲ್ಲದರಿಂದ ಸಾನಿಯಾ ಖುಷಿಗೊಂಡಿದ್ದಾರೆ.
2008ರಲ್ಲಿ ಗಾಯಾಳುವಾಗಿದ್ದ ಸಾನಿಯಾ ಇತ್ತೀಚಿನ ಫೆಡ್ ಕಪ್ ತಂಡದಿಂದ ಗಾಯಾಳುವಾಗಿದ್ದ ಕಾರಣ ಹಿಂದೆ ಸರಿದಿದ್ದರು. ಆದರೆ ತನ್ನ ದೈಹಿಕ ಕ್ಷಮತೆ ಮತ್ತು ಪ್ರದರ್ಶನದ ಬಗ್ಗೆ ತಾನೀಗ ಸಂತಸದಿಂದಿರುವುದಾಗಿ ಆಕೆ ತಿಳಿಸಿದ್ದಾರೆ.
"ಕಳೆದೊಂದು ವಾರದಿಂದ ನಾನು ಹೈದರಾಬಾದ್‌ನಲ್ಲಿ ಅಭ್ಯಾಸ ನಿರತಳಾಗಿದ್ದೇನೆ. ನನ್ನ ಮಣಿಕಟ್ಟು ಉತ್ತಮವಾಗಿ ಕೆಲಸ ಮಾಡುತ್ತಿದೆ. ಒಟ್ಟಾರೆ ನಾನು ನನ್ನ ದೈಹಿಕ ಕ್ಷಮತೆಯ ಬಗ್ಗೆ ತೃಪ್ತಿಯಿಂದಿದ್ದೇನೆ" ಎಂದರು.
ಸಾನಿಯಾ ಮುಂದಿನ ವಾರ 'ಗಿಲ್ ರೇಯಾಸ್' ತರಬೇತಿ ಕೇಂದ್ರಕ್ಕೆ ತೆರಳಲಿದ್ದು ಈ ಬಗ್ಗೆ ಕಾತರದಿಂದ ಕಾಯುತ್ತಿರುವುದಾಗಿ ಆಕೆ ತಿಳಿಸಿದ್ದಾರೆ. "ಆಂದ್ರೆ ಅಗಸ್ಸಿ ಮತ್ತು ಫೆರ್ನಾಂಡೋ ವಾರ್ಡಸ್ಕೋರಂತಹ ವಿಶ್ವದ ಅಗ್ರ ಆಟಗಾರರಿಗೆ ತರಬೇತಿ ನೀಡಿರುವ ಗಿಲ್ ಅತ್ಯುತ್ತಮ ತರಬೇತುದಾರರಾಗಿದ್ದಾರೆ. ಅದ್ಭುತ ಅನುಭವ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೇನೆ. ಕಠಿಣ ಪರಿಶ್ರಮದ ನಿರೀಕ್ಷೆಗಳೊಂದಿಗೆ ನಾನಲ್ಲಿಗೆ ತೆರಳುತ್ತಿದ್ದೇನೆ" ಎಂದಿದ್ದಾರೆ ಸಾನಿಯಾ.
"ಒಂದು ವಾರದ ತರಬೇತಿ ಎಂದರೆ ತುಂಬಾ ಕಡಿಮೆ ಸಮಯ. ಆದರೆ ಇದು ಆರಂಭವಾಗಿರುವುದರಿಂದ ಹೆಚ್ಚು ಪ್ರಾಮುಖ್ಯತೆ ಕೊಡಬೇಕಾಗಿದೆ. ಕೆಲವು ಕಠಿಣ ಟೂರ್ನಮೆಂಟ್‌ಗಳ ಮೊದಲಿನ ಈ ತರಬೇತಿಯನ್ನು ನಾನು ನಿಯಮಿತ ಅವಧಿಯಲ್ಲಿ ಮುಗಿಸಬೇಕಾಗಿದೆ" ಎಂದು ಆಕೆ ತಿಳಿಸಿದರು.