ವಿಶ್ವದ ನಂ.1 ದಿನಾರಾ ಸಫಿನಾ ತನ್ನ ಸ್ವದೇಶಿ ಎದುರಾಳಿ ಸ್ವೆಟ್ಲಾನಾ ಕುಜುಂತ್ಸೋವಾರನ್ನು 6-3, 6-2ರ ನೇರ ಸೆಟ್‌ಗಳಿಂದ ಮಣಿಸುವ ಮೂಲಕ ರೋಮ್ ಅಂತಾರಾಷ್ಟ್ರೀಯ ಡಬ್ಲ್ಯೂಟಿಎ ಟೂರ್ನಮೆಂಟ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಹೋರಾಟದಲ್ಲಿ ಏಳನೇ ಶ್ರೇಯಾಂಕಿತೆಯ ಹಲವು ಉದ್ದೇಶರಹಿತ ತಪ್ಪುಗಳ ಲಾಭ ಪಡೆದ ಸಫಿನಾ ಸುಲಭವಾಗಿ ಜಯ ಸಾಧಿಸಿದರು.
ಕಳೆದ ವಾರದ ಸ್ಟುಗಾರ್ಟ್ ಓಪನ್‌ನಲ್ಲಿ ಕುಜುಂತ್ಸೋವಾ ವಿರುದ್ಧ ಸಫಿನಾ 6-4, 6-3ರಿಂದ ಸೋಲುಂಡಿದ್ದ ಹಗೆಯನ್ನೂ ಇದರೊಂದಿಗೆ ಅಗ್ರ ಶ್ರೇಯಾಂಕಿತೆ ತೀರಿಸಿದರು.
ಸಫಿನಾ ಈ ವರ್ಷ ಪ್ರವೇಶಿಸಿದ್ದ ನಾಲ್ಕು ಫೈನಲ್‌ಗಳಲ್ಲಿ ಗಳಿಸಿದ ಮೊದಲನೇ ಪ್ರಶಸ್ತಿಯಿದು. ಇತ್ತೀಚಿನ ಎರಡು ಗ್ರಾಂಡ್ ಸ್ಲಾಮ್‌ಗಳಾದ ಈ ವರ್ಷದ ಆಸ್ಟ್ರೇಲಿಯನ್ ಓಪನ್ ಹಾಗೂ ಕಳೆದ ವರ್ಷದ ಸಿಡ್ನಿ ಫೈನಲ್‌ಗಳಲ್ಲಿಯೂ ಆಕೆ ಸೋಲುಂಡಿದ್ದರು.
ಜತೆ ವಿಶ್ವದ ನಂ.1 ಆಟಗಾರ್ತಿಯಾದ ನಂತರ 23ರ ಸಫಿನಾ ಗೆದ್ದ ಮೊದಲ ಪ್ರಶಸ್ತಿ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಏಪ್ರಿಲ್ 20ರಂದು ನಂ.1 ಸ್ಥಾನದಲ್ಲಿದ್ದ ಸೆರೆನಾ ವಿಲಿಯಮ್ಸ್‌ರನ್ನು ಕೆಳಗಿಳಿಸಿ ತಾನು ಆ ಸ್ಥಾನವನ್ನೇರಿದ್ದರು.
ಇಲ್ಲಿ ಟೂರ್ನಮೆಂಟ್‌ನ 2007ರ ಫೈನಲ್ ಪ್ರವೇಶಿಸಿದ್ದ ಕುಜುಂತ್ಸೋವಾ ಜೆಲೆನಾ ಜಾಂಕೊವಿಕ್ ವಿರುದ್ಧ ಸೋಲುಂಡಿದ್ದರು. ಅದಕ್ಕೂ ಹಿಂದಿನ ವರ್ಷ ಮಾರ್ಟಿನಾ ಹಿಂಗಿಸ್‌ರೆದುರು ದಿನಾರಾ ಸಫಿನಾ ಫೈನಲ್‌ನಲ್ಲಿ ಸೋಲುಂಡಿದ್ದರು.