ಫ್ರೆಂಚ್ ಓಪನ್: ರಾಫೆಲ್ ಗೆಲುವಿನ ಕನಸು ಭಗ್ನ

ಸೋಮವಾರ, 1 ಜೂನ್ 2009 (11:03 IST)
PTI
ನಾಲ್ಕು ಬಾರಿ ಟೆನಿಸ್ ಚಾಂಪಿಯನ್ ‌ಪ್ರಶಸ್ತಿಯ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದ ವಿಶ್ವ ನಂ.1 ಆಟಗಾರ ರಾಫೆಲ್ ನಡಾಲ್ ಫ್ರೆಂಚ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನ ನಾಲ್ಕನೇ ಸುತ್ತಿನಲ್ಲಿ ಪರಾಜಯಗೊಳ್ಳುವ ಮೂಲಕ ಅಗ್ರಶ್ರೇಯಾಂಕದ ಆಟಗಾರನ ಗೆಲುವಿನ ಕನಸು ಭಗ್ನಗೊಂಡಂತಾಗಿದೆ.

ಫ್ರೆಂಚ್ ಓಪನ್ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ನಿರಾಯಾಸವಾಗಿ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದ ರಾಫೆಲ್ ಗೆಲುವಿನ ಕನಸು ಹೊತ್ತಿದ್ದರು. ಆದರೆ ಭಾನುವಾರ ನಡೆದ ಹಣಾಹಣಿಯಲ್ಲಿ ರಾಫೆಲ್ ಎದುರಾಳಿ ಸ್ವೀಡನ್‌ನ ರೋಬಿನ್ ಸೋಡರ್‌ಲಿಂಗ್ ‌‌ಎದುರು 6-2, 6-7, 6-4, 7-6ರ ಮ್ಯಾಚ್ ಪಾಯಿಂಟ್ ಅಂತರದಿಂದ ಸೋಲುವ ಮೂಲಕ ಫ್ರೆಂಚ್ ಓಪನ್‌ನಿಂದ ಹೊರಬಿದ್ದಿದ್ದಾರೆ.

ರೋಲ್ಯಾಂಡ್ ಗ್ಯಾರೋಸ್‌ನ ಕೆಂಪು ಜೇಡಿಮಣ್ಣಿನ ಅಂಕಣದಲ್ಲಿ ಸುಮಾರು ಮೂರುವರೆ ತಾಸುಗಳ ಕಾಲ ನಡೆದ ರೋಚಕ ಆಟದಲ್ಲಿ ವಿಶ್ವ ನಂ.1ಆಟಗಾರ ನಡಾಲ್ ಕೊನೆಗೂ ರೋಬಿನ್‌ಗೆ ಶರಣಾಗುವ ಮೂಲಕ ಲಕ್ಷಾಂತರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.
2005ರಿಂದ ಸತತ ನಾಲ್ಕು ಬಾರಿ ಟೆನಿಸ್ ಚಾಂಪಿಯನ್ ಟೈಟಲ್ ಪ್ರಶಸ್ತಿಯನ್ನು ಬಾಚಿಕೊಳ್ಳುತ್ತಿದ್ದ ನಡಾಲ್ ಈ ಬಾರಿ ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ. ಪ್ರತಿಬಾರಿಯ ಆಟದಲ್ಲಿಯೂ ನಾನು ಇದೊಂದು ತರಬೇತಿಯ ಆಟ ಎಂದುಕೊಂಡೇ ಹಣಾಹಣಿಗಿಳಿಯುತ್ತೇನೆ, ಆದರೆ ಯಾವಾಗ ಪ್ರಥಮ ಸೆಟ್‌ನಲ್ಲಿಯೇ 4-1ರ ಟ್ರೈಬೇಕರ್‌ನೊಂದಿಗೆ ಮುನ್ನಡೆ ಸಾಧಿಸಿದಾಗ, ನನ್ನಲ್ಲೂ ಗೆಲುವಿನ ಆಸೆ ಮೂಡಿತ್ತು ಎಂದು ರೋಬಿನ್ ಅಭಿಪ್ರಾಯ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ