ಫ್ರೆಂಚ್ ಓಪನ್: ಸ್ವೆಟ್ಲಾನಾ ವಿರುದ್ಧ ಸೆರೆನಾ ಪರಾಜಯ

ಗುರುವಾರ, 4 ಜೂನ್ 2009 (11:21 IST)
PTI
ರಷ್ಯಾದ 7ನೇ ಶ್ರೇಯಾಂಕದ ಆಟಗಾರ್ತಿ ಸ್ವೆಟ್ಲಾನಾ ಕುಜ್ನೇಸ್ಟೋವಾ ಫ್ರೆಂಚ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಪ್ರಬಲ ಎದುರಾಳಿ ವಿಶ್ವ ನಂ.2ಶ್ರೇಯಾಂಕದ ಸೆರೆನಾ ವಿಲಿಯಮ್ಸ್‌ಗೆ ಸೋಲಿನ ರುಚಿ ಉಣಿಸಿ ಸೆಮಿ ಫೈನಲ್‌ಗೆ ಕಾಲಿಟ್ಟಿದ್ದಾರೆ.

ಟೆನಿಸ್ ರಂಗದಲ್ಲಿ ಪ್ರಬಲ ಎದುರಾಳಿ ಎಂದೇ ಪರಿಗಣಿಸಲ್ಪಟ್ಟಿರುವ ವಿಶ್ವ ನಂ.2 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಬುಧವಾರ ನಡೆದ ಹಣಾಹಣಿಯಲ್ಲಿ ರಷ್ಯಾದ ಸ್ವೆಟ್ಲಾನಾಗೆ 7-6(7-3), 5-7, 7-5ರ ಅಂತರದಲ್ಲಿ ಶರಣಾಗುವ ಮೂಲಕ ಸೆರೆನಾ ಗೆಲುವಿನ ಕನಸು ಕಮರಿಹೋದಂತಾಗಿದೆ.

ಏಳನೇ ಶ್ರೇಯಾಂಕದ ಆಟಗಾರ್ತಿ ಸ್ವೆಟ್ಲಾನಾ ಅವರು ನಾಲ್ಕರ ಘಟ್ಟದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸಮಂತಾ ಸ್ಟಾಸರ್ ವಿರುದ್ಧ ಪೈಪೋಟಿ ನಡೆಸುವರು, ಸಮಂತಾ ಬುಧವಾರ ನಡೆದ ಮತ್ತೊಂದು ಎಂಟರ ಘಟ್ಟದ ಪಂದ್ಯದಲ್ಲಿ ರೋಮೆನಿಯಾದ ಸೊರಾನಾ ಅವರನ್ನು ಮಣಿಸಿದ್ದರು.

ರಷ್ಯಾದ ಸ್ವೆಟ್ಲಾನಾ 2006ರ ಟೆನಿಸ್ ಚಾಂಪಿಯನ್‌ಷಿಪ್ ಟೂರ್ನ್‌ಮೆಂಟ್‌ನ ರನ್ನರ್ ಅಫ್ ಆಗಿದ್ದರು. ಬುಧವಾರ ನಡೆದ ಹಣಾಹಣಿಯಲ್ಲಿ ಪ್ರಥಮ ಸೆಟ್‌ನಲ್ಲಿಯೇ ಉತ್ತಮ ಪ್ರದರ್ಶನ ತೋರುವ ಮೂಲಕ 3-0ರ ಅಂತರ ಮುನ್ನಡೆ ಕಾಯ್ದುಕೊಂಡಿದ್ದರು. ಎರಡನೇ ಸೆಟ್‌ನಲ್ಲಿ ವಿಲಿಯಮ್ಸ್ ಪ್ರಬಲ ಹೋರಾಟ ನೀಡಿದರೂ ಕೂಡ ಕೊನೆಯಲ್ಲಿ ಸೋಲಿಗೆ ಶರಣಾದರು.

ವೆಬ್ದುನಿಯಾವನ್ನು ಓದಿ