ವಿಶ್ವ ಚಾಂಪಿಯನ್‌ಶಿಪ್ ಸಿದ್ಧತೆಯಲ್ಲಿ ಸೈನಾ, ಭಟ್

ಮಂಗಳವಾರ, 9 ಜೂನ್ 2009 (17:02 IST)
ಸಿಂಗಾಪುರ ಓಪನ್ ಸೂಪರ್ ಸಿರೀಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಇಂಗಿತವನ್ನು ಅರವಿಂದ್ ಭಟ್ ವ್ಯಕ್ತಪಡಿಸಿದ್ದರೆ, ಸೈನಾ ನೆಹ್ವಾಲ್ ಯಾವುದೇ ಗುರಿಯನ್ನು ಹೊಂದಿಲ್ಲ ಎಂದಿದ್ದಾರೆ. ಆದರೆ ಹೈದರಾಬಾದ್‌ನಲ್ಲಿ ನಡೆಯಲಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗಿದು ಪೂರ್ವತಯಾರಿ ಎಂದು ಇಬ್ಬರೂ ಪರಿಗಣಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇತರ ಭಾರತೀಯ ಆಟಗಾರರಿಗಿಂತ ಕಠಿಣ ಸವಾಲುಗಳನ್ನು ಎದುರಿಸುತ್ತಿರುವ ಅರವಿಂದ್ ಭಟ್ ಮಂಗಳವಾರ ಆರಂಭವಾಗಿರುವ ಸಿಂಗಾಪುರ ಓಪನ್ ಸೂಪರ್ ಸಿರೀಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಇಚ್ಛೆ ಹೊಂದಿದ್ದಾರೆ.

ಈ ಟೂರ್ನಮೆಂಟ್‌ನ ಆರಂಭಿಕ ಸುತ್ತಿನಲ್ಲಿ ಇಂಡೋನೇಷಿಯಾದ ಮೂರನೇ ಶ್ರೇಯಾಂಕಿತ ಸೋನಿ ದ್ವಿ ಕುಂಕೋರೋ ವಿರುದ್ಧ ವಿಶ್ವದ ನಂ.24 ಆಟಗಾರ ಭಟ್ ಆಡಲಿದ್ದು, ಎದುರಾಳಿಯ ದುರ್ಬಲತೆಯನ್ನು ಸದುಪಯೋಗಪಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

"ವಿಶ್ವ ಚಾಂಪಿಯನ್‌ಶಿಪ್‌ಗೂ ಮೊದಲು ಇದು ನಡೆಯುತ್ತಿರುವುದರಿಂದ ನನಗಿದು ಮಹತ್ವದ ಟೂರ್ನಮೆಂಟ್. ಹಾಗಾಗಿ ನಾನಿದನ್ನು ಗಂಭೀರವಾಗಿ ಸ್ವೀಕರಿಸಿದ್ದೇನೆ. ಇಲ್ಲಿ ನನ್ನ ಸದ್ಯದ ಗುರಿ ಕ್ವಾರ್ಟರ್ ಫೈನಲ್. ಆದರೆ ಅದಕ್ಕಿಂತಲೂ ನನಗೆ ಮುಖ್ಯವಾದುದು ಈ ಟೂರ್ನಮೆಂಟ್‌ನಲ್ಲಿ ಅಗ್ರ ಆಟಗಾರರೊಂದಿಗೆ ಆಡುವುದು" ಎಂದು ಭಟ್ ತಿಳಿಸಿದ್ದಾರೆ.

"ಆರಂಭಿಕ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತನ ವಿರುದ್ಧ ನಾನು ಆಡುತ್ತಿರುವುದರಿಂದ ನನಗಿದು ಕಠಿಣ ಪಂದ್ಯವೆಂದೇ ಪರಿಗಣಿಸುತ್ತೇನೆ. ಆದರೆ ಎದುರಾಳಿಯನ್ನು ನಾನು ಮಣಿಸಬಲ್ಲೆ. ಅವರೀಗ ಲಯ ಕಳೆದುಕೊಂಡಿದ್ದಾರೆ. ಹಾಗಾಗಿ ಅವರ ದುರ್ಬಲತೆಗಳನ್ನು ನಾನು ಸದುಪಯೋಗಪಡಿಸಿಕೊಳ್ಳುತ್ತೇನೆ" ಎಂದು ಅವರು ವಿವರಿಸಿದ್ದಾರೆ.

ಅದೇ ಹೊತ್ತಿಗೆ ಅಗ್ರ ಆಟಗಾರ್ತಿ ಸೈನಾ ನೆಹ್ವಾಲ್ ಈ ಟೂರ್ನಮೆಂಟ್‌ನಲ್ಲಿ ಯಾವುದೇ ನಿರ್ದಿಷ್ಟ ಗುರಿ ಹೊಂದಿಲ್ಲ. ಆಕೆಯ ಉದ್ದೇಶ ಆಗಸ್ಟ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆಯಲಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗಾಗಿ ಒಂದಿಷ್ಟು ಆತ್ಮವಿಶ್ವಾಸವನ್ನು ಕ್ರೋಢೀಕರಿಸುವುದು.

"ನಾನು ಯಾವುದೇ ಗುರಿಯನ್ನು ಹೊಂದಿಲ್ಲ. ಇಲ್ಲಿ ಸೆಮಿಫೈನಲ್ ಅಥವಾ ಕ್ವಾರ್ಟರ್ ಫೈನಲ್ ತಲುಪಬೇಕೆಂಬ ಬಗ್ಗೆ ಯೋಚಿಸುತ್ತಿಲ್ಲ. ನಾನು ಅಲ್ಲಿಗೆ ಹೋಗಿ ಕೆಲವು ಪಂದ್ಯಗಳನ್ನಾಡಿ ಗೆಲ್ಲಲು ಯತ್ನಿಸುತ್ತೇನೆ. ವಿಶ್ವ ಚಾಂಪಿಯನ್‌ಶಿಪ್‌ಗೆ ತೆರಳುವ ಮುನ್ನ ಆತ್ಮವಿಶ್ವಾಸ ಮೈಗೂಡಿಸಿಕೊಳ್ಳಲಿದ್ದೇನೆ" ಎಂದು ಸುದೀರ್ಮನ್ ಕಪ್‌ನಲ್ಲಿ ಯಶಸ್ವೀ ಪ್ರದರ್ಶನ ನೀಡಿದ್ದ ನೆಹ್ವಾಲ್ ತಿಳಿಸಿದ್ದಾರೆ.

ಆರನೇ ಶ್ರೇಯಾಂಕಿತೆ ಸೈನಾ ವಿರುದ್ಧ ಕ್ವಾಲಿಫೈಯರ್ ಆಟಗಾರ್ತಿ ಆರಂಭಿಕ ಸುತ್ತಿನಲ್ಲಿ ಎದುರಾಗಲಿರುವುದರಿಂದ ಪಂದ್ಯವನ್ನು ಸುಲಭವೆಂದೇ ಪರಿಗಣಿಸಲಾಗುತ್ತಿದೆ. ಆದರೆ ವಿಶ್ವದ ನಂ.7 ಆಟಗಾರ್ತಿ ಎದುರಾಳಿಯನ್ನು ಹಗುರವಾಗಿ ಪರಿಗಣಿಸಲು ಇಚ್ಛಿಸುತ್ತಿಲ್ಲ.

"ನಾನು ಆರಂಭಿಕ ಸುತ್ತಿನಲ್ಲಿ ಕ್ವಾಲಿಫೈಯರ್ ವಿರುದ್ಧ ಆಡುತ್ತಿದ್ದೇನೆ. ಆದರೆ ಆಕೆಯನ್ನು ಹಗುರವಾಗಿ ಪರಿಗಣಿಸಲಾರೆ. ಎದುರಾಳಿಯು ಅರ್ಹತಾ ಸುತ್ತುಗಳಲ್ಲಿ ಆಡುವ ಮೂಲಕ ಇಲ್ಲಿನ ವಾತಾವರಣದ ಲಾಭ ಪಡೆದುಕೊಂಡಿರುವುದರಿಂದ ಆಕೆ ಲಾಭಕರ ಹಂತದಲ್ಲಿದ್ದಾರೆ. ಹಾಗಾಗಿ ಪಂದ್ಯ ಕಠಿಣವಾಗಿರಬಹುದು" ಎಂದರು.

ವೆಬ್ದುನಿಯಾವನ್ನು ಓದಿ