ಸೋದರ್ಲಿಂಗ್ ಮಡಿಲಿಗೆ 'ಸ್ವೀಡಿಶ್ ಓಪನ್'

ಸೋಮವಾರ, 20 ಜುಲೈ 2009 (15:31 IST)
ಫ್ರೆಂಚ್ ಓಪನ್ ಫೈನಲ್‌ಗೆ ತಲುಪಿ ಅಚ್ಚರಿ ಮೂಡಿಸಿದ್ದ ಸ್ವೀಡನ್‌ನ ರಾಬಿನ್ ಸೋದರ್ಲಿಂಗ್ ಇಲ್ಲಿ ಅಂತ್ಯಗೊಂಡ ಸ್ವಿಡೀಶ್ ಓಪನ್ ಟೂರ್ನಿಯನ್ನು ಗೆದ್ದುಕೊಂಡಿದ್ದಾರೆ. ಇದು ಅವರು ಜಯಿಸಿರುವ ಮೊತ್ತ ಮೊದಲ ಆವೆ ಮಣ್ಣಿನ ಎಟಿಪಿ ಪ್ರಶಸ್ತಿಯೂ ಹೌದು.

ಭಾನುವಾರ ನಡೆದ ಫೈನಲ್‌ನಲ್ಲಿ ವಿಶ್ವದ 12ನೇ ರ‌್ಯಾಂಕ್‌ನ ಸೋದರ್ಲಿಂಗ್, ಅರ್ಜೇಂಟೀನಾದ ಜುವಾನ್ ಮೊನಾಕೊ ವಿರುದ್ಧ 6-3, 7-6 ಕಠಿಣ ಸೆಟ್‌ನಲ್ಲಿ ಮಣಿಸಿ ಪ್ರಶಸ್ತಿ ಗೆದ್ದುಕೊಂಡರು. ಇದರೊಂದಿಗೆ ತನ್ನ ಒಂಬತ್ತು ವರ್ಷಗಳ ಸುದೀರ್ಘ ಆವೆ ಮಣ್ಣಿನ ಜಯದ ಬರಗಾಲಕ್ಕೆ ಗೆಲುವಿನ ಸಿಂಚನ ಮೂಡಿಸಿದರು.

ಮೊದಲ ಸೆಟ್ ಅನ್ನು 6-3 ಅಂತರದಲ್ಲಿ ಸುಲಭವಾಗಿ ಜಯಿಸಿದ ಸೋದರ್ಲಿಂಗ್‌ಗೆ ಎರಡನೇ ಸೆಟ್‌ನಲ್ಲಿ ಎದುರಾಳಿ ಪ್ರಬಲ ಪೈಪೋಟಿಯನ್ನೇ ನೀಡಿದರು. ಆದರೆ ಅಂತಿಮವಾಗಿ ಟ್ರೈ ಬ್ರೇಕರ್ ಮೂಲಕ ರಾಬಿನ್ ಎರಡನೇ ಸೆಟ್ ವಶಪಡಿಸಿಕೊಂಡರು.

ರಾಬಿನ್-ಮೊನಾಕೊ ಇದುವರೆಗೆ ಐದು ಬಾರಿ ಪರಸ್ಪರ ಮುಖಾಮುಖಿಯಾಗಿದ್ದು, ಇದರಲ್ಲಿ ನಾಲ್ಕು ಬಾರಿ ಜಯ ಗಳಿಸಿದ ಕೀರ್ತಿ ರಾಬಿನ್‌ರದ್ದು. ಅಲ್ಲದೆ ಫ್ರೆಂಚ್ ಓಪನ್ ಚಾಂಪಿಯನ್‌ಷಿಪ್‌ನಲ್ಲಿ ರಾಫೆಲ್ ನಡಾಲ್‌ರನ್ನು ಮಣಿಸಿದ ವಿಶ್ವದ ಏಕೈಕ ಆಟಗಾರ ಎಂಬ ದಾಖಲೆಯೂ ಅವರ ಹೆಸರಿನಲ್ಲಿದೆ.

ವೆಬ್ದುನಿಯಾವನ್ನು ಓದಿ