ಪ್ರತಿಷ್ಠಿತ ಅಮೆರಿಕನ್ ಓಪನ್ ಗ್ರಾಂಡ್ ಸ್ಲಾಮ್ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಮಹೇಶ್ ಭೂಪತಿಯವರು ತನ್ನ ಜತೆಗಾರನೊಂದಿಗೆ ಮೂರನೇ ಶ್ರೇಯಾಂಕ ಪಡೆದಿದ್ದು, ಮತ್ತೊಬ್ಬ ಭಾರತೀಯ ಲಿಯಾಂಡರ್ ಪೇಸ್ ನಾಲ್ಕನೇ ಶ್ರೇಯಾಂಕಿತರಾಗಿ ಕಣಕ್ಕಿಳಿಯಲಿದ್ದಾರೆ.
ಮೋಂಟ್ರಿಯಾಲ್ ಮಾಸ್ಟರ್ಸ್ ವಿಜೇತ ಜೋಡಿ ಭೂಪತಿ - ಬಹಾಮಿಯನ್ ಮಾರ್ಕ್ ನೋವ್ಲ್ಸ್‌ರವರು ಮೂರನೇ ಶ್ರೇಯಾಂಕ ಪಡೆದಿದ್ದು, ಆರಂಭಿಕ ಸುತ್ತಿನಲ್ಲಿ ಅಮೆರಿಕಾ - ಕ್ರೊವೇಶಿಯಾ ಜೋಡಿ ಜೇಮ್ಸ್ ಸೆರೆಟಾನಿ - ಲಾವ್ರೋ ಝಾವ್ಕೋರನ್ನು ಮುಖಾಮುಖಿಯಾಗಬೇಕಿದೆ.
ಪೇಸ್ ತನ್ನ ಝೆಕ್ ಗಣರಾಜ್ಯದ ಜತೆಗಾರ ಲುಕಾಸ್ ದ್ಲೋಹಿಯವರೊಂದಿಗೆ ನಾಲ್ಕನೇ ಶ್ರೇಯಾಂಕಿತರಾಗಿದ್ದು, ರೋಮನ್ ಜತೆಗಾರರಾದ ವಿಕ್ಟರ್ ಹನೆಸ್ಕ್ಯೂ- ಗ್ರಾಬ್ರಿಯಲ್ ಟ್ರಿಫೂರನ್ನು ಎದುರಿಸಬೇಕಿದೆ.
ಶ್ರೇಯಾಂಕರಹಿತ ಸಿಂಗಲ್ಸ್ ಆಟಗಾರ್ತಿ ಸಾನಿಯಾ ಮಿರ್ಜಾ, ತನ್ನ ಡಬಲ್ಸ್ ಜತೆಗಾತಿ ಇಟಲಿಯ ಫ್ರಾನ್ಸಿಸ್ಕಾ ಸ್ಚೈವೋನ್ ಜತೆ 14ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ.
ಈ ಜೋಡಿ ಬೆಲೂರಾಸ್ - ಝೆಕ್ ಗಣರಾಜ್ಯದ ಎಕತರಿನಾ ಜೆಹಾಲೆವಿಚ್ - ರೆನೆಟಾ ವೊರಕೋವಾರನ್ನು ಮುಖಾಮುಖಿಯಾಗಬೇಕಿದೆ.
ಮಿಶ್ರ ಡಬಲ್ಸ್ ವಿಭಾಗದ ಶ್ರೇಯಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಈ ವಿಭಾಗದ ಹಾಲಿ ಚಾಂಪಿಯನ್‌ಗಳಾದ ಪೇಸ್ ಮತ್ತು ಜಿಂಬಾಬ್ವೆಯ ಕಾರಾ ಬ್ಲಾಕ್ ಪ್ರಸಕ್ತ ವರ್ಷವೂ ಸ್ಪರ್ಧಿಸಲಿದ್ದಾರೆ.
ಭೂಪತಿ ಮತ್ತು ಸಾನಿಯಾ ಸ್ಪರ್ಧೆಯ ಬಗ್ಗೆ ಇನ್ನೂ ಖಚಿತತೆ ಕಂಡು ಬಂದಿಲ್ಲ. ಸಾನಿಯಾ ಗಾಯದ ಸಮಸ್ಯೆ ಎದುರಿಸುತ್ತಿರುವ ಕಾರಣ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗಿದೆ.