ಹಾಕಿಗೂ ಬರಲಿದೆ ಲೀಗ್; ಆದರೆ ಆಟಗಾರರ ಹರಾಜಿಲ್ಲ

ಶನಿವಾರ, 15 ಜನವರಿ 2011 (14:20 IST)
ಇದೇ ವರ್ಷಾಂತ್ಯದಲ್ಲಿ ಭಾರತೀಯ ಹಾಕಿ ಫೆಡರೇಷನ್ ಪರಿಚಯಿಸಲಿರುವ 'ವರ್ಲ್ಡ್ ಸಿರೀಸ್ ಹಾಕಿ'ಯಲ್ಲಿ ಆಸ್ಟ್ರೇಲಿಯಾದ ಜೆಮ್ಮಿ ಡ್ವೇಯರ್ ಮತ್ತು ಪಾಕಿಸ್ತಾನದ ಕೆಲವು ಆಟಗಾರರು ಸೇರಿದಂತೆ ವಿದೇಶಗಳ ಕನಿಷ್ಠ 100 ಮಂದಿ ಆಟಗಾರರು ಉತ್ಸುಕರಾಗಿದ್ದಾರೆ ಎಂದು ಸಂಘಟಕರು ಹೇಳಿಕೊಂಡಿದ್ದಾರೆ.

ಸಾಕಷ್ಟು ಅಂತಾರಾಷ್ಟ್ರೀಯ ಆಟಗಾರರು ತಮ್ಮ ಜತೆ ಸಂಪರ್ಕದಲ್ಲಿದ್ದಾರೆ. ಆದರೆ ಅವರ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ನಿಂಬಸ್ ಸ್ಟೋರ್ಟ್ಸ್ ಹಿರಿಯ ನಿರ್ವಹಣಾಧಿಕಾರಿ ಯಾನಿಕ್ ಕೊಲಾಸೋ ತಿಳಿಸಿದ್ದಾರೆ.

ಮೂಲಗಳ ಪ್ರಕಾರ 10 ಆಸ್ಟ್ರೇಲಿಯಾ ಮತ್ತು ಏಳು ಪಾಕಿಸ್ತಾನಿ ಆಟಗಾರರು ತಮ್ಮ ಏಜೆಂಟರ ಮೂಲಕ ಸಂಘಟಕರ ಜತೆ ಸಂಪರ್ಕದಲ್ಲಿದ್ದಾರೆ. ಅಲ್ಲದೆ ಪ್ರೀಮಿಯರ್ ಹಾಕಿ ಲೀಗಿನಲ್ಲಿರುವ ವಿದೇಶಗಳ ಆಟಗಾರರು ಕೂಡ ಈ ಲೀಗಿನಲ್ಲಿ ಪಾಲ್ಗೊಳ್ಳಲು ಆಸಕ್ತರಾಗಿದ್ದಾರೆ.

ವಿಶ್ವದಾದ್ಯಂತದ ಆಟಗಾರರಿಂದ ನಾವು ಅದ್ಭುತ ಪ್ರತಿಕ್ರಿಯೆ ಪಡೆದಿದ್ದೇವೆ. ನೂರಕ್ಕೂ ಹೆಚ್ಚು ಆಟಗಾರರು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ. ಆದರೆ ನಮಗೆ ಬೇಕಾಗಿರುವುದು ಕೇವಲ 60 ಆಟಗಾರರು ಮಾತ್ರ. ಅವರ ಆಯ್ಕೆ ಕುರಿತು ನಾವು ಮುಂದಿನ ತಿಂಗಳು ಪರಿಶೀಲನೆ ನಡೆಸಲಿದ್ದೇವೆ ಎಂದು ಮೂಲವೊಂದು ಹೇಳಿದೆ.

ಇಲ್ಲಿ ಐಪಿಎಲ್ ರೀತಿಯಲ್ಲಿ ಹರಾಜು ಇರುವುದಿಲ್ಲ. ಅಮೆರಿಕಾದಲ್ಲಿನ ಎನ್‌ಬಿಐ ಬಾಸ್ಕೆಟ್ ಬಾಲ್ ಆಟದಲ್ಲಿ ಬಳಸಲಾಗುತ್ತಿರುವ ವ್ಯವಸ್ಥೆಯ ಮೂಲಕ ಇಲ್ಲಿ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಎಂದು ಭಾರತೀಯ ಹಾಕಿ ಫೆಡರೇಷನ್ ಅಧ್ಯಕ್ಷ ಆರ್.ಕೆ. ಶೆಟ್ಟಿ ತಿಳಿಸಿದ್ದಾರೆ.

ನಮ್ಮ ಲೀಗಿನಲ್ಲಿ ನಾಲ್ಕು ಗ್ರೇಡುಗಳ ಆಟಗಾರರಿರುತ್ತಾರೆ. ಎ ಪ್ಲಸ್ ವಿಭಾಗದ ಆಟಗಾರರು 45ರಿಂದ 55 ಲಕ್ಷ ರೂಪಾಯಿ ಹಾಗೂ ಎ, ಬಿ, ಸಿ ಗ್ರೇಡಿನ ಆಟಗಾರರು ಕ್ರಮವಾಗಿ 40-50, 30-40, 20-30 ಲಕ್ಷ ರೂಪಾಯಿಗಳನ್ನು ಪಡೆಯಲಿದ್ದಾರೆ ಎಂದು ಶೆಟ್ಟಿ ವಿವರಣೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ