ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಗ್ರಾಂಡ್‌ಸ್ಲಾಮ್ ಟೆನಿಸ್ ಟೂರ್ನಮೆಂಟ್‌ನ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ರಷ್ಯನ್ ತಾರೆ ಮರಿಯಾ ಶರಪೋವಾ ಶುಭಾರಂಭ ಮಾಡಿಕೊಂಡಿದ್ದಾರೆ.
ಸೋಮವಾರ ಥಾಲೈಂಡ್‌ನ ತಾಮರೈನ್ ತಾನಸುರ್ಗಾನ್ ವಿರುದ್ಧ ನಡೆದ ಮೊದಲ ಸುತ್ತಿನ ಪಂದ್ಯವನ್ನು 6-1, 6-3ರ ಅಂತರದಲ್ಲಿ ಗೆದ್ದುಕೊಂಡ ಶರಪೋವಾ ಪ್ರಶಸ್ತಿಗಾಗಿ ಒಂದು ಹೆಜ್ಜೆ ಮುಂದಿಟ್ಟರು.
ಮೊದಲ ಸೆಟನ್ನು ಕೇವಲ 26 ನಿಮಿಷಗಳಲ್ಲಿ ವಶಪಡಿಸಿದ 2008ರ ಚಾಂಪಿಯನ್ ಶರಪೋವಾ ದ್ವಿತೀಯ ಸುತ್ತಿನಲ್ಲಿ 1-4ರ ಹಿನ್ನೆಡೆ ಅನುಭವಿಸಿದ್ದರು. ಆದರೆ ತಮ್ಮ ಅನುಭವ ಪೂರ್ಣ ಲಾಭ ಪಡೆದ 14ನೇ ಶ್ರೇಯಾಂಕಿತೆ ಅಮೋಘ ಆಟ ಪ್ರದರ್ಶಿಸುವ ಮೂಲಕ ಪಂದ್ಯದಲ್ಲಿ ತಿರುಗಿ ಬಿದ್ದರು.
ಇದೀಗ ಎರಡನೇ ಸುತ್ತಿನಲ್ಲಿ ಶರಪೋವಾ ಅವರು ಸ್ವದೇಶದವರೇ ಆದ ಎಲೆನಾ ವೆಸ್ನಿನಾ ಅಥವಾ ಫ್ರೆಂಚ್‌ನ ವೆರ್ಜಿನೆ ರಜಾನೊ ಅವರನ್ನು ಎದುರಿಸಲಿದ್ದಾರೆ.