ದ್ವಿತೀಯ ಸುತ್ತಿಗೆ ಲಗ್ಗೆ ಹಾಕಿದ ಫೆವರೀಟ್ ನಡಾಲ್

ಮಂಗಳವಾರ, 18 ಜನವರಿ 2011 (12:10 IST)
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ ಸ್ಪೇನ್‌ನ ರಾಫೆಲ್ ನಡಾಲ್ ದ್ವಿತೀಯ ಸುತ್ತಿಗೆ ಲಗ್ಗೆ ಹಾಕಿದ್ದಾರೆ.

ಮೊದಲ ಸುತ್ತಿನ ಪಂದ್ಯದಲ್ಲಿ ಎದುರಾಳಿ ಬ್ರೆಜಿಲ್‌ನ ಮಾರ್ಕಸ್ ಡ್ಯಾನಿಯಲ್ ಗಾಯಗೊಂಡ ಪರಿಣಾಮ ಪಂದ್ಯದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ನಡಾಲ್ ಮುನ್ನಡೆ ದಾಖಲಿಸಿದರು.

ಸತತ ನಾಲ್ಕನೇ ಗ್ರಾಂಡ್‌ಸ್ಲಾಮ್ ಟೂರ್ನಿ ಗೆಲುವು ಎದುರು ನೋಡುತ್ತಿರುವ ನಡಾಲ್ ಪಂದ್ಯದಲ್ಲಿ 6-0, 5-0 ಅಂತರದ ಮುನ್ನಡೆ ದಾಖಲಿಸಿದ್ದರು. ಈ ಹಂತದಲ್ಲಿ ಎದುರಾಳಿ ಪಂದ್ಯದಿಂದ ನಿವೃತ್ತಿ ಘೋಷಿಸಿದರು. ಇದರಿಂದಾಗಿ ನಡಾಲ್ ಅವರನ್ನು ವಿಜೇತರೆಂದು ಘೋಷಿಸಲಾಯಿತು.

ಇದರೊಂದಿಗೆ ಗ್ರಾಂಡ್‌ಸ್ಲಾಮ್ ಪಂದ್ಯಗಳ ಗೆಲುವನ್ನು 22ಕ್ಕೆ ಏರಿಸಿರುವ ನಡಾಲ್ ಮುಂದಿನ ಪಂದ್ಯವನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದರು.

ಒಂದು ವೇಳೆ ಈ ಪ್ರತಿಷ್ಠಿತ ಟೂರ್ನಿ ಗೆಲ್ಲುವಲ್ಲಿ ನಡಾಲ್ ಯಶಸ್ವಿಯಾದಲ್ಲಿ ಎರಡನೇ ಆಸ್ಟ್ರೇಲಿಯನ್ ಓಪನ್ ಹಾಗೂ ಒಟ್ಟಾರೆ 10ನೇ ಗ್ರಾಂಡ್‌ಸ್ಲಾಮ್ ಟೂರ್ನಿ ಗೆಲುವು ಆಗಿರಲಿದೆ. ಕಳೆದ ವರ್ಷ ಯುಎಸ್ ಓಪನ್ ಗೆದ್ದುಕೊಂಡಿದ್ದ ನಡಾಲ್ ಎಲ್ಲ ನಾಲ್ಕು ಗ್ರಾಂಡ್‌ಸ್ಲಾಮ್ ಗೆದ್ದುಕೊಂಡ ವಿಶ್ವದ ಏಳನೇ ಆಟಗಾರ ಎನಿಸಿದ್ದರು.

ವೆಬ್ದುನಿಯಾವನ್ನು ಓದಿ