ವಿಶ್ವ ನಂ.1 ಬಾಕ್ಸಿಂಗ್ ಪಟು ಭಾರತದ ವಿಜೇಂದರ್ ಸಿಂಗ್ ಅವರು ಹೆಚ್ಚಿನ ತರಬೇತಿಗಾಗಿ ಯೂರೋಪ್‌ಗೆ ಶಿಫ್ಟ್ ಮಾಡಿಕೊಳ್ಳುವ ಯೋಜನೆ ಇರಿಸಿಕೊಂಡಿದ್ದಾರೆ.
2012ರ ಒಲಿಂಪಿಕ್ಸ್ ಲಂಡನ್‌ನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ವಿಜೇಂದರ್ ತಮ್ಮ ತಲಹದಿಯನ್ನು ಜರ್ಮನಿ ಅಥವಾ ಯುಕೆಗೆ ಸ್ಥಳಾಂತರ ಮಾಡಲು ಬಯಸಿದ್ದಾರೆ.
ಈ ಬಗ್ಗೆ ಸದ್ಯದಲ್ಲೇ ಉಚಿತವಾದ ತಿರ್ಮಾನ ಕೈಗೊಳ್ಳಲಿದ್ದೇನೆ ಎಂದು ಹರಿಯಾಣ ಮೂಲದ ಬಾಕ್ಸರ್ ನುಡಿದರು. ರಾಂಚಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟ ಸಂದರ್ಭದಲ್ಲಿ ಮಾತನಾಡಿದ ಅವರು ಇದು ಯುವ ಕ್ರೀಡಾಪಟುಗಳಿಗೆ ಉತ್ತಮ ಅವಕಾಶವಾಗಿರಲಿದೆ ಎಂದರು.
ರಾಷ್ಟ್ರೀಯ ಗೇಮ್ಸ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ ನನ್ನ ಪಾಲಿಗೆ ಪ್ರಮುಖ ಕೂಟಗಳು. ಆದರೆ ರಾಷ್ಟ್ರೀಯ ಗೇಮ್ಸ್‌ನಲ್ಲಿ ಭಾಗವಹಿಸುವುದರ ಕುರಿತಂತೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿಲ್ಲ. ಯಾಕೆಂದರೆ ಯುವ ಕ್ರೀಡಾಳುಗಳಿಗೆ ಉತ್ತಮ ಅವಕಾಶ ಒದಗಿಸುವುದು ನನ್ನ ಇರಾದೆಯಾಗಿದೆ ಎಂದವರು ನುಡಿದರು. 34ನೇ ರಾಷ್ಟ್ರೀಯ ಗೇಮ್ಸ್ ಫೆಬ್ರವರಿ 12ರಿಂದ 26ರ ವರೆಗೆ ನಡೆಯಲಿದೆ.
ಅದೇ ಹೊತ್ತಿಗೆ ಸುರಂಜಯ್ ಸಿಂಗ್ ಮತ್ತು ಜೈ ಭಾಗ್‌ವಾನ್ ಅವರಂತಹ ಯುವ ಆಟಗಾರರ ಉತ್ತಮ ಪ್ರದರ್ಶನವು ನನ್ನ ಮತ್ತು ಅಖಿಲ್ ಕುಮಾರ್ ಅವರಂತಹ ಹಿರಿಯ ಆಟಗಾರರ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ ಎಂದವರು ಹೇಳಿದರು. ನಾನು ಪ್ರತಿ ಬಾರಿಯೂ ಅಗ್ರಪಟ್ಟದಲ್ಲಿರಲಾರೆ. ಹೀಗಾಗಿ ನನ್ನ ಸ್ಥಾನವನ್ನು ಯಾರಾದರೂ ಕಬಳಿಸಲೇಬೇಕು ಎಂದರು ವಿಜೆಂದರ್.