ಗ್ರಾಂಡ್‌ಸ್ಲಾಮ್; ಫೆಡರರ್ ಸತತ 27ನೇ ಬಾರಿ ಕ್ವಾರ್ಟರ್ ಸಾಧನೆ
ಭಾನುವಾರ, 23 ಜನವರಿ 2011 (15:44 IST)
ಸ್ವೀಜರ್ಲೆಂಡ್‌ನ ರೋಜರ್ ಫೆಡರರ್ ಭಾನುವಾರ ಮತ್ತೊಂದು ಸಾಧನೆ ಮಾಡಿದ್ದಾರೆ. ಪ್ರತಿಷ್ಠಿತ ಗ್ರಾಂಡ್‌ಸ್ಲಾಮ್ ಟೂರ್ನಮೆಂಟ್‌ನಲ್ಲಿ ಸತತ 27ನೇ ಬಾರಿಗೆ ಕ್ವಾರ್ಟರ್‌ಫೈನಲ್‌ಗೇರಿದ ಜಿಮ್ಮಿ ಕಾನ್ನೊರ್ ದಾಖಲೆಯನ್ನು ವಿಶ್ವ ನಂ. 2 ಆಟಗಾರ ಫೆಡರರ್ ಸರಿಗಟ್ಟಿದ್ದಾರೆ.
ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಎದುರಾಳಿ ಟೊಮಿ ರೊಬ್ರೆಡೊರನ್ನು 6-3, 3-6, 6-3, 6-2ರ ನೇರ ಸೆಟ್‌ನಲ್ಲಿ ಮಣಿಸಿದ ಫೆಡರರ್ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸಿದರು.
ಫೆಡರರ್ 2004ರ ಫ್ರೆಂಚ್ ಓಪನ್‌ನ ಮೂರನೇ ಸುತ್ತಿನಲ್ಲೇ ನಿರ್ಗಮಿಸಿದ್ದರು. ತದಾ ನಂತರ ಆಡಿದ ಎಲ್ಲ ಗ್ರಾಂಡ್‌ಸ್ಲಾಮ್ ಟೂರ್ನಿಗಳಲ್ಲೂ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು.
16 ಬಾರಿ ಗ್ರಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿರುವ ವಿಶ್ವದ ಮೊದಲ ಆಟಗಾರನೆಂಬ ಗೌರವಕ್ಕೆ ಪಾತ್ರರಾಗಿರುವ ಫೆಡರರ್ ಈ ಬಾರಿಯ ಆಸ್ಟ್ರೇಲಿಯಾ ಏಪನ್ ಗೆಲ್ಲುವ ಭರವಸೆ ಹೊಂದಿದ್ದಾರೆ.