ಆಸ್ಟ್ರೇಲಿಯಾ ಓಪನ್‌ನಲ್ಲಿ ನಡಾಲ್‌ಗೆ ಹೀನಾಯ ಸೋಲು

ಗುರುವಾರ, 27 ಜನವರಿ 2011 (09:00 IST)
ಆಸ್ಟ್ರೇಲಿಯಾ ಓಪನ್ ಗ್ರಾಂಡ್ ಸ್ಲಾಮ್ ಟೂರ್ನಮೆಂಟ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತನ್ನದೇ ದೇಶದ ಡೇವಿಡ್ ಫೆರರ್ ಕೈಯಲ್ಲಿ ಹೀನಾಯವಾಗಿ ಸೋತಿರುವ ವಿಶ್ವದ ನಂಬರ್ ವನ್ ಟೆನಿಸ್ ಆಟಗಾರ ಸ್ಪೇನ್‌ನ ರಾಫೆಲ್ ನಡಾಲ್ ತೀವ್ರ ನಿರಾಸೆ ಅನುಭವಿಸಿದ್ದಾರೆ.

ಗಾಯಾಳುವಾಗಿ ಕಣಕ್ಕಿಳಿದಿದ್ದ ನಡಾಲ್ 6-4, 6-2, 6-3ರ ಅಂತರದಿಂದ ಫೆರರ್ ಎದುರು ಪರಾಭವ ಹೊಂದಿದರು. ಇದರೊಂದಿಗೆ ಸತತ ನಾಲ್ಕು ಗ್ರಾಂಡ್ ಸ್ಲಾಮ್‌ಗಳನ್ನು ಜಯಿಸುವ ನಡಾಲ್ ಆಸೆ ಮಣ್ಣು ಪಾಲಾದಂತಾಗಿದೆ.

ಇಂತಹ ದಾಖಲೆ ಮಾಡಿದವರು ಇದುವರೆಗೆ ಡಾನ್ ಬಾಡ್ಜ್ ಮತ್ತು ರಾಡ್ ಲೇವರ್ ಮಾತ್ರ. ವಿಂಬಲ್ಡನ್ ಮತ್ತು ಯುಎಸ್ ಓಪನ್ ಗೆದ್ದುಕೊಂಡಿದ್ದ ನಡಾಲ್ ಅದೇ ಸಾಧನೆ ಮಾಡುವ ಸಾಧ್ಯತೆಗಳಿದ್ದವು. ಈ ಆಸ್ಟ್ರೇಲಿಯನ್ ಓಪನ್ ಗೆದ್ದು, ನಂತರ ಫ್ರೆಂಚ್ ಓಪನ್ ಕೂಡ ಗೆಲ್ಲಲು ಸಾಧ್ಯವಾಗುತ್ತಿದ್ದರೆ, ವಿಶಿಷ್ಟ ಸಾಧನೆ ಮಾಡಿದ ಮೂರನೇ ಆಟಗಾರ ಎನಿಸಿಕೊಳ್ಳುತ್ತಿದ್ದರು.

2.33 ಗಂಟೆಗಳ ಕಲಾ ರಾಡ್ ಲೇವರ್ ಅರೆನಾದಲ್ಲಿ ನಡೆದ ಈ ಪಂದ್ಯದ ಎರಡನೇ ಗೇಮ್‌ನಲ್ಲಿ ತೀವ್ರ ಬಾಧೆಗೊಳಗಾದ ನಡಾಲ್ ವೈದ್ಯಕೀಯ ಸಿಬ್ಬಂದಿಯಿಂದ ಪೂರಕ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೂ, ಸತತ ಮೂರು ಗೇಮ್‌ಗಳಲ್ಲೂ ಅವರು ಸೋಲುಂಡು ನಿರಾಸೆ ಅನುಭವಿಸಿದರು.

ಕಳೆದ 15 ಮುಖಾಮುಖಿಯಲ್ಲಿ ನಡಾಲ್ ವಿರುದ್ಧ ಏಳನೇ ಶ್ರೇಯಾಂಕಿತ ಫೆರರ್ ದಾಖಲಿಸಿರುವ ನಾಲ್ಕನೇ ಗೆಲುವಿದು. ಇದರೊಂದಿಗೆ ಫೆರರ್ ಶುಕ್ರವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಬ್ರಿಟನ್‌ನ ಐದನೇ ಶ್ರೇಯಾಂಕಿತ ಆಂಡಿ ಮುರ್ರೆಯವರನ್ನು ಮುಖಾಮುಖಿಯಾಗಲಿದ್ದಾರೆ.

2007ರಲ್ಲಿ ಯುಎಸ್ ಓಪನ್ ಸೆಮಿಫೈನಲ್ ಪ್ರವೇಶಿಸಿದ್ದ ಫೆರರ್ ಅವರಿಗೆ ಆಸ್ಟ್ರೇಲಿಯಾ ಓಪನ್‌ ಅಂತಿಮ ನಾಲ್ಕರ ಸುತ್ತು ಅವರ ಗ್ರಾಂಡ್ ಸ್ಲಾಮ್ ಕ್ರೀಡಾ ಜೀವನದಲ್ಲಿ ಎರಡನೇಯದ್ದು.

ವೆಬ್ದುನಿಯಾವನ್ನು ಓದಿ