ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕಿತ ಆಟಗಾರ ರೋಜರ್ ಫೆಡರರ್, ತಮ್ಮ ಸೆರ್ಬಿಯಾ ಎದುರಾಳಿ ನೊವಾಕ್ ಜೊಕಾವಿಕ್ ವಿರುದ್ಧ ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.
2008ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಜೊಕೊವಿಕ್, ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ಎದುರಾಳಿ ಫೆಡರರ್ ವಿರುದ್ಧ 7-6, 7-5, 6-4 ಸೆಟ್‌ಗಳಿಂದ ಜಯಗಳಿಸಿ ಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ.
ಜೊಕೊವಿಕ್, ಫೈನಲ್ ಪಂದ್ಯದಲ್ಲಿ ಬ್ರಿಟನ್‌ನ ಸ್ಕಾಟ್‌ಲೆಂಡ್ ಮೂಲದ ಆಂಡಿ ಮುರ್ರೆ ಅಥವಾ ಡೇವಿಡ್ ಫೆರರ್ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.
ಇದಕ್ಕಿಂತ ಮೊದಲು, ರಫೆಲ್ ನಡಾಲ್ ನಿರ್ಗಮಿಸಿ ಅಭಿಮಾನಿಗಳಿಗೆ ಆಘಾತ ಮೂಡಿಸಿದ್ದರು. ಇದೀಗ ರೋಜರ್ ಫೆಡರರ್ ಕೂಡಾ ನಿರ್ಗಮಿಸಿರುವುದು ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದೆ.
ಪಂದ್ಯಾವಳಿಗೆ ಮುನ್ನ ನಡಾಲ್ ಮತ್ತು ಫೆಡರರ್ ಮಧ್ಯೆ ಫೈನಲ್ ಪಂದ್ಯ ನಡೆಯಲಿದ್ದು, ಪಂದ್ಯ ರೋಚಕವಾಗಿರುತ್ತದೆ ಎಂದು ಟೆನಿಸ್ ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆದರೆ, ಅಭಿಮಾನಿಗಳ ನಿರೀಕ್ಷೆ ತಲೆಕೆಳಗಾಗಿ ಅಚ್ಚರಿಯ ಫಲಿತಾಂಶ ಬಂದಿದೆ.
ಸ್ಪೇನ್ ಆಟಗಾರ ಡೇವಿಡ್ ಫೆರರ್ ವಿರುದ್ಧ ರಫೆಲ್ ನಡಾಲ್ ಸೋಲನುಭವಿಸಿ ನಿರಾಸೆ ಮೂಡಿಸಿದ್ದಾರೆ. ಇದೀಗ ಜೊಕೊವಿಕ್ ಫೈನಲ್ ಹಂತವನ್ನು ತಲುಪಿದ್ದಾರೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಆಂಡಿ ಮುರ್ರೆ ಮತ್ತು ಫೆರ್ರರ್ ಹಣಾಹಣಿ ನಡೆಸಲಿದ್ದಾರೆ.
ಆಂಡಿ ಮುರ್ರೆ ಒಂದು ವೇಳೆ ಫೈನಲ್‌ನಲ್ಲಿ ಜಯಗಳಿಸಿದಲ್ಲಿ, 1936ರ ನಂತರ ಗ್ರ್ಯಾಂಡ್‍ಸ್ಲ್ಯಾಮ್ ಪ್ರಶಸ್ತಿ ಪಡೆದ ಮೊದಲ ಬ್ರಿಟನ್ ಆಟಗಾರ ಎನ್ನುವ ಖ್ಯಾತಿಗೊಳಗಾಗುತ್ತಾರೆ.