ಎರಡು ತಿಂಗಳುಗಳ ಕಾಲ ಟೆನಿಸ್ನಿಂದ ದೂರ ಉಳಿದರೂ ಕೂಡ ಸಾನಿಯಾ ಮಿರ್ಜಾ ಪಾಲಿಗೆ ವರ್ಷ 2007 ಅವಿಸ್ಮರಣೀಯ ಎಂದೇ ಹೇಳಬಹುದು. ತನ್ನ ಟೆನಿಸ್ ಜೀವನದಲ್ಲಿ ಮೊದಲ ಬಾರಿಗೆ ಸಿಂಗಲ್ಸ್ನಲ್ಲಿ 27 ಶ್ರೇಯಾಂಕವನ್ನು ತಲುಪಿದ್ದು ಬಹುಶಃ ಈವರೆಗಿನ ಅವರ ಟೆನಿಸ್ ಜೀವನದ ಅಧ್ಯಾಯಗಳಲ್ಲಿ ಪ್ರಮುಖವಾದುದು ಎನ್ನಲಡ್ಡಿಯಿಲ್ಲ.
2007ರ ಪ್ರಾರಂಭದಲ್ಲಿ ಮೊಣಕಾಲು ನೋವಿನಿಂದ ಬಳಲಿ, ಶಸ್ತ್ರಚಿಕಿತ್ಸೆಯ ಬಳಿಕ ಎರಡು ತಿಂಗಳ ವಿಶ್ರಾಂತಿಯ ನಂತರ ಟೆನಿಸ್ಗೆ ಮರಳಿದ ಕೂಡಲೇ ಯಶಸ್ಸಿನ ಹಾದಿಯಲ್ಲಿ ಸಾಗಿದ್ದು ಗಮನಿಸಿದರೆ ಪ್ರಾರಂಭದ ದಿನಗಳಲ್ಲಿ ಬಂದ ಆ ಯಶಸ್ಸುಗಳು ಚಣಕಾಲದ ಮಿಂಚಲ್ಲ. ಬದಲಿಗೆ ಕಠಿಣ ಪರಿಶ್ರಮದ ಯಶಸ್ಸುಗಳು ಎಂಬುದನ್ನು ಸಾಬೀತು ಪಡಿಸಿದವು.
PTI
ಹೊಬಾರ್ಟ್ ಮತ್ತು ಪಟ್ಟಾಯಾಗಳಲ್ಲಿ ನಡೆದ ಟೆನಿಸ್ ಟೂರ್ನಿಯ ಸೆಮಿಫೈನಲ್ವರೆಗೆ ತಲುಪಿದ ನಂತರ ಮೊಣಕಾಲು ನೋವು ಮಾರ್ಚ್ ತಿಂಗಳಿನಲ್ಲಿ ವಕ್ಕರಿಸಿ ಎರಡು ತಿಂಗಳುಗಳನ್ನು ಸಾನಿಯಾರಿಂದ ಕಿತ್ತು ಕೊಂಡಿತು. ಶಸ್ತ್ರ ಚಿಕಿತ್ಸೆಯ ನಂತರ ವರ್ಷದ ಎರಡನೆ ಇನ್ನಿಂಗ್ಸ್, ಸ್ಟ್ಯಾನ್ಫೋರ್ಡ್ ಟೆನಿಸ್ ಟೂರ್ನಿಯ ಮೂಲಕ ಪ್ರಾರಂಭವಾಯಿತು. ಸ್ಟ್ಯಾನ್ಫೋರ್ಡ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಸಾನಿಯಾ ಮಿರ್ಜಾ ಫೈನಲ್ವರೆಗೆ ತಲುಪಿ ಪರಾಭವಗೊಂಡರು. ಸಾನಿಯಾ ಮಿರ್ಜಾ ಅವರ ವರ್ಷದ ಟೆನಿಸ್ ಆಟದಲ್ಲಿ ಸೋಲಿನ ಕಂತೆಗಳೇ ತುಂಬಿಕೊಂಡಿವೆ. ಆದರೆ ತಮ್ಮ ದೈತ್ಯ ಸಂಹಾರಿಣಿ ಪಾತ್ರವನ್ನು ವರ್ಷದುದ್ದಕ್ಕೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
PTI
ಮಾರ್ಟಿನಾ ಹಿಂಗಿಸ್ರಿಂದ ಹಿಡಿದು ಅಗ್ರ 20ರ ಶ್ರೇಯಾಂಕದಲ್ಲಿನ ಐವರು ಟೆನಿಸ್ ಪಟುಗಳಿಗೆ ಸೋಲಿನ ರುಚಿ ತೋರಿಸಿದ್ದಾರೆ. ಅನ್ನಾ ಚಕ್ವತಡ್ಜೆ ಮಾತ್ರ ಸಾನಿಯಾ ಪಾಲಿಗೆ ಕಗ್ಗಂಟಾಗಿ ಉಳಿದಿದ್ದಾರೆ. ವರ್ಷದ ಪ್ರಾರಂಭದಲ್ಲಿ ಹೈದರಾಬಾದ್ ಮೂಲದ ಟೆನಿಸ್ ಆಟಗಾರ್ತಿಯ ಶ್ರೇಯಾಂಕ 66ಕ್ಕೆ ತಲುಪಿತ್ತು. ಅಂತ್ಯದಲ್ಲಿ ಶ್ರೇಯಾಂಕ 27ಕ್ಕೆ ಬಂದು ತಲುಪಿತ್ತು. ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಮೊದಲ ಟೆನಿಸ್ ಆಟಗಾರ್ತಿಯಾಗಿ ಕಾಣಿಸಿಕೊಂಡ ಸಾನಿಯಾ ಮಿರ್ಜಾ ಅನ್ನಾ ಚಕ್ವತಡ್ಜೆ ವಿರುದ್ಧ ನಡೆದ ಮೂರನೆ ಸುತ್ತಿನ ಪಂದ್ಯದಲ್ಲಿ ಸೋಲು ಅನುಭವಿಸಿದರು.
ಉಪಗ್ರಹ ತಂತ್ರಜ್ಞಾನದ ಸಾಧನೆ ಈ ವರ್ಷದಲ್ಲಿ ಭಾರತವು ಮರುಬಳಕೆಯ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಹಾರಿಬಿಟ್ಟಿದ್ದು, ಅದನ್ನು ಕಕ್ಷೆಯಿಂದ ಭೂಮಿಗೆ ಮರಳಿ ಕರೆ ತರುವಲ್ಲಿ ಯಶಸ್ವಿಯಾಗಿದೆ. ಈ ತಂತ್ರಜ್ಞಾನದಲ್ಲಿ ಭಾರತವೀಗ ಅಮೆರಿಕ, ಚೀನ ಮತ್ತು ರಷ್ಯಾಗಳ ಸರಿಸಮವಾಗಿ ನಿಂತಿದೆ.
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಹಾರಿಬಿಡಲಾದ ಧ್ರುವಗಾಮಿ ಉಪಗ್ರಹವಾಹನ ಪಿಎಸ್ಎಲ್ವಿ-ಸಿ7, ನಾಲ್ಕು ಉಪಗ್ರಹಗಳನ್ನು ಏಕಕಾಲಕ್ಕೆ ಕಕ್ಷೆ ಸೇರಿಸಿತ್ತು. ಮರುಬಳಕೆ ಉಪಗ್ರಹ ಎಸ್ಆರ್ಇ-1 ಸೇರಿದಂತೆ ಎರಡು ದೇಶಿಯ ಉಪಗ್ರಹಗಳು ಮತ್ತು ಅರ್ಜೆಂಟಿನಾ ಮತ್ತು ಇಂಡೊನೇಶ್ಯಾದ ತಲಾ ಒಂದೊಂದು ಉಪಗ್ರಹಗಳನ್ನು ಪಿಎಸ್ಎಲ್ವಿ-ಸಿ7 ಹೊತ್ತೊಯ್ದಿತ್ತು.
ಪ್ರಥಮ ಮಹಿಳಾ ರಾಷ್ಟ್ರಪತಿ 'ಪ್ರತಿಭೆ' ಭಾರತ ಸ್ವತಂತ್ರವಾಗಿ 60 ವರ್ಷದ ಬಳಿಕ ವಜ್ರಮಹೋತ್ಸವದ ವೇಳೆ ರಾಷ್ಟ್ರ ಪ್ರಥಮವಾಗಿ ಮಹಿಳಾ ರಾಷ್ಟ್ರಪತಿಯನ್ನು ಕಂಡಿತು. ಪ್ರಥಮ ಮಹಿಳಾ ರಾಜ್ಯಪಾಲರಾದ ಕೀರ್ತಿಯನ್ನು ಮಡಿಲಲ್ಲಿರಿಸಿಕೊಂಡಿರುವ ಪ್ರತಿಭಾ ಪಾಟೀಲ್, ಮಹಾರಾಷ್ಟ್ರದ ಜಲಗಾಂವ್ನವರು. ಜುಲೈ 25ರಂದು ಪ್ರತಿಭಾ ಪಾಟೀಲ್ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾರ್ಪೊರೆಟ್ ವಲಯದ ಇಂದ್ರಾ ನೂಯಿ ಅಂತಾರಾಷ್ಟ್ರೀಯ ಪತ್ರಿಕೆಗಳಾದ ಫೋರ್ಬ್ಸ್ ಮತ್ತು ಟೈಮ್ಸ್ ನಿಯತಕಾಲಿಕೆಗಳು ಪಟ್ಟಿ ಮಾಡಿದ ಪ್ರಭಾವಿ ಮಹಿಳೆಯರ ಸಾಲಿನಲ್ಲಿ ಕಂಡುಬಂದರು.
ಪ್ರಥಮ ದಲಿತ ಮುಖ್ಯನ್ಯಾಯಾಧೀಶ ಇದೇ ವರ್ಷದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ಉನ್ನತ ಸ್ಥಾನಕ್ಕೆ ದಲಿತ ವರ್ಗದ ನ್ಯಾಯಾಧೀಶರೊಬ್ಬರ ನೇಮಕವಾಯಿತು. ಕೇರಳದ ತಲಯೋಲಪರಂಬು ಎಂಬಲ್ಲಿನ ಕೊನಕುಪ್ಪಕಟ್ಟಿಲ್ ಗೋಪಿನಾಥನ್ ಬಾಲಕೃಷ್ಣನ್ ರಾಷ್ಟ್ರದ ನ್ಯಾಯಾಂಗದಲ್ಲಿ ಈ ವರ್ಷದ ಜನವರಿ 14ರಂದು ಹೊಸ ಇತಿಹಾಸ ಬರೆದರು. ಇವರು ಒಟ್ಟು ಮೂರು ವರ್ಷ ನಾಲ್ಕು ತಿಂಗಳು ಅಧಿಕಾರಾವಧಿಯಲ್ಲಿ ಇರುತ್ತಾರೆ.
ಐಶ್ವರ್ಯಾ ವಿವಾಹ ಈ ವರ್ಷದ ಭಾರೀ ವಿವಾಹ ಅಭೈಶ್ ವಿವಾಹ. ಬಾಲಿವುಡ್ ಮಿಂಚುಳ್ಳಿಗಳಾದ ಐಶ್ವರ್ಯಾ ರೈಮತ್ತು ಅಭಿಶೇಕ್ ಬಚ್ಚನ್ ಅವರ ವಿವಾಹ ಏಪ್ರಿಲ್ ತಿಂಗಳಲ್ಲಿ ಮುಂಬೈಯಲ್ಲಿ ಅಮಿತಾಭ್ ಬಚ್ಚನ್ ನಿವಾಸದಲ್ಲಿ ಅದ್ದೂರಿಯಾಗಿ ನಡೆಯಿತು. ಅಮಿತಾಭ್ ಬಚ್ಚನ್ ಅವರ ತಾಯಿಯವರ ಅನಾರೋಗ್ಯದ ನಿಮಿತ್ತ ಆಡಂಬರ ಕಡಿಮೆ ಎನ್ನಲಾಗಿದ್ದರೂ, ವಿವಾಹ ಅತ್ಯಂತ ಖಾಸಗಿಯಾಗಿ ಆದರೆ, ಅದ್ದೂರಿಯಾಗೇ ನಡೆಯಿತು.
ಈ ವಿವಾಹದಲ್ಲಿ ಪಾಲ್ಗೊಳ್ಳಲು ಮಾಧ್ಯಮದವರಾಗಲಿ ಇತರರಿಗಾಗಲೀ ಅವಕಾಶ ಇರಲಿಲ್ಲ. ಮದುವೆಯ ಕುರಿತ ದೊಡ್ಡ ಸಂಖ್ಯೆಯ ಕುತೂಹಲಿಗಳು ಬಚ್ಚನ್ ಬಂಗ್ಲೆಯ ಹೊರಗಡೆ ಜಮಾಯಿಸಿದ್ದು ಎಲ್ಲಿ ಯಾವ ದೃಶ್ಯ ಕಾಣುತ್ತದೆ, ಯಾವ್ಯಾವ ಸೆಲೆಬ್ರಿಟಿಗಳು ಬಂದರು, ಹೋದರು ಎಂಬುದನ್ನು ಕತ್ತುದ್ದ ಮಾಡಿ ಇಣುಕಿದ್ದೇ ಇಣುಕಿದ್ದು. ಮೊಮ್ಮಗನ ಮದುವೆ ಕಾದಿದ್ದಂತೆ ಅಮಿತಾಬ್ ಅವರ ತಾಯಿ ತೇಜಿ ಬಚ್ಚನ್, ಡಿಸೆಂಬರ್ 21ರಂದು ಇಹಲೋಕ ತ್ಯಜಿಸಿದರು.
ಶಿಲ್ಪಾ ಶೆಟ್ಟಿ ಅತ್ತ ಐಶ್ವರ್ಯಾ ರೈ ಮದುವೆಯಾಗಿ ಸುದ್ದಿಮಾಡಿದಲ್ಲಿ, ದಕ್ಷಿಣ ಕನ್ನಡದ ಇನ್ನೊಬ್ಬ ಬಂಟರ ಹುಡುಗಿ ಶಿಲ್ಪಾಶೆಟ್ಟಿ ಬೇರೆ ಕಾರಣಕ್ಕೆ ಸುದ್ದಿಗೆ ಗುದ್ದು ನೀಡಿದ್ದರು. ತನ್ನ ನೀಳಕಾಯದ ಥಳುಕಿನಿಂದಾಗಿ 'ಕಾಣೆ ಮೀನು' ಎಂದು ಕರೆಸಿಕೊಂಡಿರುವ ಶಿಲ್ಪಾ, ಬ್ರಿಟನ್ನಿನ ಚಾನೆಲ್ 4 ವಾಹಿನಿಯ ಸೆಲೆಬ್ರಿಟಿ ಬಿಗ್ ಬ್ರದರ್- ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹ ಸ್ಪರ್ಧಿಗಳಿಂದ ಜನಾಂಗೀಯ ನಿಂದನೆಗೊಳಪಟ್ಟದ್ದು ಜಾಗತಿಕ ಇಶ್ಯೂ ಆಗಿತ್ತು. ಸಹಸ್ಪರ್ಧಿ ಜೇಡ್ ಗೂಡಿ ಈಕೆಯನ್ನು 'ಕರಿಯಳು, ನಾಯಿ' ಎಂದೆಲ್ಲ ಜರೆದು ಶಿಲ್ಪಾ ಕಣ್ಣೀರಿಳಿಸುವಂತೆ ಮಾಡಿದ್ದರೆ, ಶಿಲ್ಪಾ ಪರನಿಂತ ಬೆಂಬಲಿಗರು ಗೂಡಿಯ ನೀರಿಳಿಸಿದ್ದು, ಆಕೆ ಕಾರ್ಯಕ್ರಮದಿಂದಲೇ ಔಟ್ ಆಗಿದ್ದಳು.
ಈ ಕಾರ್ಯಕ್ರಮದಿಂದಾಗಿ ಸಾಕಷ್ಟು ದುಡ್ಡು ಹಾಗೂ ಪ್ರಚಾರ ಗಿಟ್ಟಿಸಿಕೊಂಡ ಶಿಲ್ಪಾ, ಅವಕಾಶವನ್ನು ಚೆನ್ನಾಗೆ ಬಳಸಿಕೊಂಡರು. ಇದಲ್ಲದೆ ಏಡ್ಸ್ ವಿರುದ್ಧ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಹಾಲಿವುಡ್ ನಟ ರಿಚರ್ಡ್ ಗೇರ್, ಶಿಲ್ಪಾ ಶೆಟ್ಟಿ ಕೆನ್ನೆಗೆ ನೀಡಿದ ಮುತ್ತು ಸಾಕಷ್ಟು ಕಾವೇರಿಸಿತ್ತು. ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ವರ್ತನೆಯ ಆರೋಪ ಕಂಡ ಈ ಪ್ರಕರಣ ನ್ಯಾಯಾಲಯದ ಕಟಕಟೆ ಏರಿದೆ.
ಸಂಜೋತಾ ಎಕ್ಸ್ಪ್ರೆಸ್ ರೈಲು ಸ್ಫೋಟ ಭಾರತ ಮತ್ತು ಪಾಕಿಸ್ತಾನದ ಬಾಂಧವ್ಯ ವೃದ್ಧಿಯ ನಿಟ್ಟಿನಲ್ಲಿ ಆರಂಭಿಸಲಾಗಿದ್ದ ದೆಹಲಿ ಹಾಗೂ ಪಾಕಿಸ್ತಾನದ ಅಟಾರಿ ನಡುವಣ ಓಡಾಟದ ಸಂಜೋತಾ ಎಕ್ಸ್ಪ್ರೆಸ್ ರೈಲಿನಲ್ಲಿ ಬಾಂಬ್ ಸ್ಫೋಟಿಸಲಾಗಿತ್ತು. ಉಭಯ ದೇಶದ ಬಾಂಧವ್ಯಕ್ಕೇ ಕೊಳ್ಳಿ ಇಟ್ಟ ಈ ಬಾಂಬ್ ಸ್ಫೋಟದಿಂದಾಗಿ 67 ಮಂದಿ ಸಾವಿಗೀಡಾಗಿದ್ದರು.