ಬೆಂಗಳೂರು:ನಾವು ಯಾವ ದಿಕ್ಕಿಗೆ ಮಲಗಬೇಕು ಎಂಬುದಕ್ಕೂ ಧರ್ಮಶಾಸ್ತ್ರದಲ್ಲಿ ಕೆಲವೊಂದು ನಿಯಮಗಳಿವೆ. ಇದರಿಂದ ನಮಗೆ ವೈಜ್ಞಾನಿಕವಾಗಿಯೂ ಒಳಿತಾಗುತ್ತದೆ. ಅದೇ ರೀತಿ ಬಾಗಿಲು ಇರುವ ದಿಕ್ಕಿಗೆ ತಲೆಹಾಕಿ ಮಲಗಬಹುದೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಸಾಮಾನ್ಯವಾಗಿ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ಇದು ವೈಜ್ಞಾನಿಕವಾಗಿಯೂ ಸತ್ಯ. ಭೂಮಿ ಪ್ರದಕ್ಷಿಣವಾಗಿ ಸುತ್ತುತ್ತದೆ. ಆದರೆ ನಾವು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ಅದರ ವಿರುದ್ಧ ದಿಕ್ಕಿಗೆ ತಲೆಹಾಕಿ ಮಲಗಿದಂತಾಗುತ್ತದೆ. ಧಾರ್ಮಿಕವಾಗಿ ಉತ್ತರ ದಿಕ್ಕಿಗೆ ತಲೆ ಹಾಕುವುದು ಶ್ರೇಯಸ್ಸಲ್ಲ ಎಂದು ನಂಬಲಾಗುತ್ತದೆ.
ಅದೇ ರೀತಿ ಬಾಗಿಲು ಇರುವ ಕಡೆಗೆ ತಲೆ ಅಥವಾ ಕಾಲು ಹಾಕಿ ಮಲಗುವುದೂ ಶ್ರೇಯಸ್ಕರವಲ್ಲ. ನಮ್ಮ ಧರ್ಮಶಾಸ್ತ್ರದ ಪ್ರಕಾರ ಬಾಗಿಲು ದೇವತಾ ಸಾನಿಧ್ಯವನ್ನು ಹೊಂದಿರುತ್ತದೆ. ಈ ದಿಕ್ಕಿಗೆ ತಲೆ ಅಥವಾ ಕಾಲು ಹಾಕಿ ಮಲಗುವುದು ಶುಭವಲ್ಲ ಎಂಬ ನಂಬಿಕೆಯಿದೆ. ವಾಸ್ತು ಪ್ರಕಾರವೂ ಈ ರೀತಿ ಮಲಗುವುದರಿಂದ ನಕಾರಾತ್ಮಕ ಶಕ್ತಿ ಮನೆ ಪ್ರವೇಶಿಸುತ್ತದೆ.
ನಮ್ಮ ಪೂರ್ವಜರು, ದೇವರುಗಳು ಬಾಗಿಲಿನ ಮೂಲಕ ಮನೆ ಪ್ರವೇಶ ಮಾಡುತ್ತಾರೆ. ಹೀಗಾಗಿ ಈ ದಿಕ್ಕಿಗೆ ತಲೆ ಅಥವಾ ಕಾಲು ಹಾಕಿ ಮಲಗವುದರಿಂದ ನೆಗೆಟಿವ್ ಎನರ್ಜಿ ಪ್ರವೇಶವಾಗಿ ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ಈ ದಿಕ್ಕಿಗೆ ಮಲಗಬೇಡಿ ಎನ್ನುತ್ತದೆ ಶಾಸ್ತ್ರಗಳು.