ಬೆಂಗಳೂರು : ಜನರು ತಮಗೆ ಎದುರಾಗುವ ಸಂಕಷ್ಟಗಳನ್ನು ಪರಿಹರಿಸುವುದಕ್ಕಾಗಿ ವಿಘ್ನವಿನಾಶಕ ಗಣೇಶನನ್ನು ಪೂಜಿಸುತ್ತಾರೆ. ಆದರೆ ಗಣೇಶನ ಪೂಜೆಗೆ ಎಲ್ಲಾ ರೀತಿಯಾದ ಹೂಗಳನ್ನು ಬಳಸುತ್ತಾರೆ. ಆದರೆ ತುಳಸಿಯನ್ನು ಗಣೇಶನ ಪೂಜೆಗೆ ಬಳಸಬಾರದು ಎಂದು ಪಂಡಿತರು ಹೇಳುತ್ತಾರೆ. ಇದಕ್ಕೆ ಕಾರಣ ಇಲ್ಲಿದೆ.
ಒಂದು ಸಲ ಗಣೇಶನು ಗಂಗಾನದಿ ತೀರದಲ್ಲಿ ತಪಸ್ಸು ಮಾಡುತ್ತಿದಾಗ ಅಲ್ಲಿಗೆ ಬಂದ ತುಳಸಿ ಎಂಬ ಯುವತಿ ಗಣೇಶನನ್ನು ನೋಡಿ ಮುಗ್ಧಳಾಗಿ, ತನ್ನನ್ನು ವಿವಾಹವಾಗುವಂತೆ ಪ್ರಾರ್ಥಿಸುತ್ತಾಳೆ. ಅದಕ್ಕೆ ಗಣೇಶನು ವಿವಾಹವಾಗುವುದರಿಂದ ತನ್ನ ತಪಸ್ಸಿಗೆ ಭಂಗವಾಗುತ್ತದೆ ಎಂದು ಹೇಳಿ ನಿರಾಕರಿಸುತ್ತಾನೆ. ಇದರಿಂದ ಕೋಪಗೊಂಡ ತುಳಸಿ ನಿನಗೆ ಬಲವಂತವಾಗಿ, ಇಷ್ಟವಿಲ್ಲದ ವಿವಾಹವು ಆಗಲಿ ಎಂದು ಶಪಿಸುತ್ತಾಳೆ. ಇದರಿಂದ ಕೋಪೋದ್ರಿಕ್ತನಾದ ಗಣೇಶನು ನಿನ್ನ ವಿವಾಹವು ಒಬ್ಬ ರಾಕ್ಷಸನೊಂದಿಗೆ ಆಗಲಿ. ಆತನಿಂದ ಹಲವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಶಪಿಸುತ್ತಾನೆ.
ತುಳಸಿ ತನ್ನ ತಪ್ಪನ್ನು ಅರಿತು ಶಾಪವಿಮೋಚನೆ ಮಾಡೆಂದು ಗಣೇಶನನ್ನು ಪ್ರಾರ್ಥಿಸುತ್ತಾಳೆ. ಅದಕ್ಕೆ ಗಣೇಶನು ಶಾಪವಿಮೋಚನೆ ಮಾಡಲಾಗುವುದಿಲ್ಲವೆಂದು, ಆದರೆ ಮುಂದಿನ ಜನ್ಮದಲ್ಲಿ ನೀನು ತುಳಸಿ ಗಿಡವಾಗಿ ಜನಿಸುವೆ ಎಂದು, ವಿಷ್ಣುವಿಗೆ ಆ ಗಿಡ ಇಲ್ಲದೆ ಪೂಜೆ ಪೂರ್ಣವಾಗುವುದಿಲ್ಲವೆಂದು ಹೇಳುತ್ತಾನೆ. ಅಷ್ಟೇ ಅಲ್ಲದೆ ಈ ಸಸಿಯು ಔಷಧ ಗುಣಗಳನ್ನು ಹೊಂದಿರುವ ವಿಷಯ ನಮಗೆಲ್ಲಾ ತಿಳಿದಿದೆ. ಆದರೆ ಇಂತಹ ಪವಿತ್ರವಾದ ತುಳಸಿಯನ್ನು ಗಣೇಶನ ಪೂಜೆಗೆ ಮಾತ್ರ ಬಳಸುವುದಿಲ್ಲ ಎಂಬುದಕ್ಕೆ ಕಾರಣ ಅವರಿಬ್ಬರ ಮಧ್ಯೆ ನಡೆದ ಈ ಘಟನೆಯೆ ಎನ್ನುತ್ತಾರೆ ಪಂಡಿತರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ