ದೇಹದ ತೂಕವನ್ನು ಇಳಿಸಲು ಈ ಜ್ಯೂಸ್‌ಗಳನ್ನು ಕುಡಿಯಿರಿ..!!

ಗುರುವಾರ, 26 ಜುಲೈ 2018 (16:26 IST)
ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ಸುಲಭದ ಮಾತಲ್ಲ ಅದಕ್ಕಾಗಿ ಸಾಕಷ್ಟು ಕಸರತ್ತು ನಡೆಸಬೇಕಾಗುತ್ತದೆ. ಕೆಲವರು ವ್ಯಾಯಾಮ ಮಾಡುವ ಮೂಲಕ ದೇಹದ ತೂಕ ಇಳಿಸಲು ಪ್ರಯತ್ನಿಸಿದರೆ, ಇನ್ನು ಕೆಲವರು ಡಯಟ್ ಮಾಡುತ್ತಾರೆ. ತೂಕ ಇಳಿಸಲು ಬೆಳಗಿನ ಹೊತ್ತು ಒಂದು ಲೋಟ ಜ್ಯೂಸ್ ಸೇವಿಸಿ, ಇದು ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಉಪಯುಕ್ತವಾಗಿದೆ.
1. ಕ್ಯಾರೆಟ್ ಜ್ಯೂಸ್
 
ಕ್ಯಾರೆಟ್‌ನಲ್ಲಿನ ಕಾರೊಟಿನ್ ಅಂಶ ದೇಹವನ್ನು ಶುದ್ಧಿಕರಿಸಿ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಇದರಲ್ಲಿರುವ ವಿಟಮಿನ್ ಎ, ಡಿ, ಇ, ಕೆ, ಆಸ್ಕಾರ್ಬಿಕ್ ಆಸಿಡ್, ಸ್ಟೆರಾಲ್ ಮತ್ತು ಲೆಸಿತಿನ್ ಅಂಶವು ಆರೋಗ್ಯಕ್ಕೆ ಬಹಳ ಉತ್ತಮ ಮತ್ತು ಇದು ದೇಹದ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ.
 
ಕ್ಯಾರೆಟ್ ಜ್ಯೂಸ್ ಮಾಡುವ ವಿಧಾನ -
 
1-2 ಕ್ಯಾರೆಟ್, 2 ಚಮಚ ಸಕ್ಕರೆ, 2 ಚಮಚ ಜೇನುತುಪ್ಪ, 1 ಚಮಚ ನಿಂಬೆ ರಸ ಹಾಗು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ ಕುಡಿಯಿರಿ. (ಬೇಕಿದ್ದರೆ ಐಸ್ ಕ್ಯೂಬ್‌ಗಳನ್ನು ಸೇರಿಸಬಹುದು)
 
2. ಸೌತೆಕಾಯಿ ಜ್ಯೂಸ್
 
ಸೌತೆ ಕಾಯಿ ಸೇವನೆ ಆರೋಗ್ಯಕ್ಕೆ ಮತ್ತು ಸೌಂದರ್ಯಕ್ಕೆ ತುಂಬಾ ಒಳ್ಳೆಯದು. ಸೌತೆಕಾಯಿಯಲ್ಲಿ 95% ನೀರು ಮತ್ತು 5% ನಾರಿನಂಶವನ್ನು ಹೊಂದಿರುವುದರಿಂದ ಇದು ದೇಹವನ್ನು ಕ್ಲೆನ್ಸ್ ಮಾಡುತ್ತದೆ. ಇದು ದೇಹಕ್ಕೆ ನೀರಿನಂಶವನ್ನು ಪೂರೈಸುವುದರ ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಇದು ದೇಹದ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ.
 
ಸೌತೆಕಾಯಿ ಜ್ಯೂಸ್ ಮಾಡುವ ವಿಧಾನ -
 
1 ಕಪ್ ಸೌತೆ ಕಾಯಿ, 4-5 ಚಮಚ ಬೆಲ್ಲದ ಪುಡಿ, 3-4 ಕರಿ ಮೆಣಸು ಮತ್ತು ಸ್ವಲ್ಪ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ ಕುಡಿಯಿರಿ. (ಬೇಕಿದ್ದರೆ ಐಸ್ ಕ್ಯೂಬ್‌ಗಳನ್ನು ಸೇರಿಸಬಹುದು)
 
3. ಹಾಗಲಕಾಯಿ ಜ್ಯೂಸ್
 
ಹಾಗಲಕಾಯಿಯಲ್ಲಿರುವ ವಿಟಮಿನ್ ಸಿ, B1, B2, B3, ಪೊಟ್ಯಾಶಿಯಂ, ಸತು, ಮ್ಯಾಂಗನೀಸ್ ನಂತಹ ಹಲವಾರು ಖನಿಜಗಳು, ವಿಸೈನ್, ಕ್ಯಾರಾಡಿನ್, ಮೊಮೋರ್ಡಿನ್ ಮೊದಲಾದ ಫೈಟೋ ನ್ಯೂಟ್ರಿಯೆಂಟುಗಳು, ಕ್ಯಾರೋಟಿನಾಯ್ಡುಗಳು ಮೊದಲಾದ ಪೋಷಕಾಂಶಗಳು ನಮ್ಮ ದೇಹಕ್ಕೆ ಬಹಳ ಉತ್ತಮವಾಗಿದೆ. 
 
ಹಾಗಲಕಾಯಿ ಜ್ಯೂಸ್ ಮಾಡುವ ವಿಧಾನ -
 
1 ಹಾಗಲಕಾಯಿಯ ಸಿಪ್ಪೆ ಮತ್ತು ಬೀಜ ತೆಗೆದು, ಸ್ವಚ್ಛಗೊಳಿಸಿ, ಸಣ್ಣದಾಗಿ ತುಂಡರಿಸಿ ಒಂದು ಪಾತ್ರೆಗೆ ಹಾಕಿ ಮತ್ತು ನೀರಿನಲ್ಲಿ 30 ನಿಮಿಷಗಳ ಕಾಲ ಹಾಗಲಕಾಯಿಯನ್ನು ಮುಳುಗಿಸಿಡಿ. ನಂತರ ಸ್ವಲ್ಪ ಉಪ್ಪು ಅಥವಾ ಲಿಂಬೆ ರಸವನ್ನು ಸೇರಿಸಿ ಮಿಕ್ಸರ್‌ನಲ್ಲಿ ಹಾಕಿ ಅಗತ್ಯವಿದ್ದಷ್ಟು ನೀರನ್ನು ಸೇರಿಸಿ.
 
4. ನೆಲ್ಲಿಕಾಯಿ ಜ್ಯೂಸ್
 
ನೆಲ್ಲಿಕಾಯಿಯಲ್ಲಿ ಹೇರಳವಾಗಿ ಸಿ ವಿಟಮಿನ್ ಇದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಪಿತ್ತವನ್ನೂ ನಿಯಂತ್ರಿಸುತ್ತದೆ. ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದರೆ, ಮಲಬದ್ಧತೆ, ಅಲ್ಸರ್, ಕರುಳಿನ ತೊಂದರೆ, ದೇಹದ ತೂಕವನ್ನು ಇಳಿಸಲೂ ರಾಮಬಾಣವಾಗಿದೆ.
 
ನೆಲ್ಲಿಕಾಯಿ ಜ್ಯೂಸ್ ಮಾಡುವ ವಿಧಾನ -
 
ನೆಲ್ಲಿಕಾಯಿಯನ್ನು ತುರಿದು ಬೀಜ ಬೇರ್ಪಡಿಸಿ ಇದಕ್ಕೆ ಸಕ್ಕರೆ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ. ಬೇಕಾದಷ್ಟು ನೀರು ಸೇರಿಸಿ. ಸ್ವಲ್ಪ ನಿಂಬೆ ರಸ ಸೇರಿಸಿ. ತಂಪಾದ ನೆಲ್ಲಿಕಾಯಿ ಜ್ಯೂಸ್ ಸಿದ್ಧ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ