ಎಳನೀರು ಕುಡಿದರೆ ಸೌಂದರ್ಯವೂ ಹೆಚ್ಚುತ್ತದೆ!

ಮಂಗಳವಾರ, 21 ಡಿಸೆಂಬರ್ 2021 (12:13 IST)
ಎಳನೀರು ದೇಹಕ್ಕೆ ಅಗತ್ಯವಾದ ಬಹಳಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಪೋಷಕಾಂಶಗಳನ್ನು ಪಡೆದ ದೇಹ ಶೀಘ್ರ ತನ್ನ ಚಟುವಟಿಕೆಗಳನ್ನು ಪೂರ್ಣ ಕ್ಷಮತೆಯಲ್ಲಿ ನಿರ್ವಹಿಸಲು ಸಬಲಗೊಳ್ಳುತ್ತದೆ.
 
ಎಳನೀರಿನ ಉಪಯೋಗ ಕೇವಲ ಕುಡಿಯುವುದಕ್ಕಲ್ಲ, ಸರಿಯಾಗಿ ಬಳಸಿದರೆ ದೇಹದ ಹೊರಭಾಗಗಳಾದ ಚರ್ಮ ಮತ್ತು ಕೂದಲ ಆರೈಕೆಗೂ ಒಳ್ಳೆಯದು.

ಜೀರ್ಣಕ್ರಿಯೆ
 ಎಳನೀರಿನಲ್ಲಿ ಫೋಲಿಕ್ ಆ್ಯಸಿಡ್, ಫಾಸ್ಪೇಟೇಸ್, ಕ್ಯಾಟಲೇಸ್, ಡಿಹೈಡ್ರೋಜೀನೇಸ್, ಡೈಯಾಸ್ಟೇಸ್, ಪೆರಾಕ್ಸಿಡೇಸ್, ಆರ್.ಎನ್.ಎ ಪಾಲಿಮರೇಸಸ್ ಮೊದಲಾದ ಕಿಣ್ವಗಳು ಇದೆ. ಇವುಗಳು ವಿವಿಧ ರೀತಿಯ ಆಹಾರಗಳು ಸುಲಭವಾಗಿ ಜೀರ್ಣವಾಗಲು ನೆರವಾಗುತ್ತವೆ. ಇದರಿಂದ ಆಹಾರಗಳ ಉತ್ತಮ ಅಂಶಗಳು ದೇಹಕ್ಕೆ ಸುಲಭವಾಗಿ ಲಭ್ಯವಾಗಿ ಆರೋಗ್ಯ ವೃದ್ಧಿಸುತ್ತದೆ.

ಆರೋಗ್ಯ
ಎಳನೀರಿನಲ್ಲಿ ಒಮೆಗಾ 3  ಹೇರಳವಾಗಿ ಇರುವುದರಿಂದ  ಗರ್ಭದಲ್ಲಿನ ಮಗುವಿನ ಮೆದುಳಿನ ಬೆಳವಣಿಗೆ ಚುರುಕಾಗಲು ಒಮೆಗಾ 3 ಸಹಾಯ ಮಾಡುತ್ತದೆ. ಗರ್ಭಿಣಿಯರು ತಮ್ಮ ಆರೋಗ್ಯಕ್ಕೆ ಹಾಗೂ ಮಗುವಿನ ಆರೋಗ್ಯ ವೃದ್ಧಿಗಾಗಿ ಎಳನೀರು ಸೇವಿಸುವುದು ಉತ್ತಮ ಎಂದು ವೈದ್ಯರು ಸಲಹೆ  ನೀಡುತ್ತಾರೆ.

ನೀರಿನ ಅಗತ್ಯ ಪೂರೈಕೆ
ಎಳನೀರಿನಲ್ಲಿರುವ ವಿವಿಧ ಖನಿಜ, ಲವಣ ಮತ್ತು ಸಕ್ಕರೆಯ ಅಂಶ ದೇಹಕ್ಕೆ ಅಗತ್ಯವಾದ ಪ್ರಮಾಣದಲ್ಲಿ ಇರುವುದರಿಂದಲೇ ಇದೊಂದು ಅಮೃತಸಮಾನವಾದ ಪಾನೀಯವಾಗಿದೆ. ದೈಹಿಕ ಚಟುವಟಿಕೆಗಳಿಗೆ ಈ ನೀರು ಅತ್ಯಂತ ಸಮರ್ಪಕ ಪ್ರಮಾಣದಲ್ಲಿ ಪೋಷಕಾಂಶಗಳನ್ನು ನೀಡುವುದರಿಂದ ಶರೀರ ತನ್ನ ಚಟುವಟಿಕೆಗಳನ್ನು ಹೆಚ್ಚು ಸಮಯ ನಿರ್ವಹಿಸಬಹುದು. ಹೆಚ್ಚಿನ ದೈಹಿಕ ಶ್ರಮವುಳ್ಳ ಕೆಲಸಕ್ಕೆ ಪ್ರತಿದಿನ ಒಂದಾದರೂ ಎಳನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮವಾಗಿದೆ.

ತ್ವಚೆಯ ಕಾಂತಿ
ತ್ವಚೆಯ ಆರೋಗ್ಯ ಉತ್ತಮವಾಗಿರಲು ದೇಹದಲ್ಲಿ ಸಾಕಷ್ಟು ಪ್ರಮಾಣದ ಆರ್ದ್ರತೆ ಇರಬೇಕು. ಎಳನೀರನ್ನು ಕುಡಿಯುವ ಹೊರತಾಗಿ ಎಳನೀರನ್ನು ತ್ಬೆಚೆಗೆ ಹಚ್ಚಿಕೊಳ್ಳುವ ಮೂಲಕವೂ ಅಗತ್ಯವಿರುವ ಪೋಷಣೆಯನ್ನು ಒದಗಿಸಬಹುದು. ಪರಿಣಾಮವಾಗಿ ಕ್ಷಿಪ್ರ ಸಮಯದಲ್ಲಿಯೇ ತ್ವಚೆ ಹೊಳೆಯಲಾರಂಭಿಸುತ್ತದೆ.

ಮೂತ್ರಪಿಂಡ
ಒಂದು ವೇಳೆ ಯೂರಿಕ್ ಆಮ್ಲ ಅಥವಾ ಸಿಸ್ಟೈನ್ ಎಂಬ ಲವಣದಿಂದ ಮೂತ್ರದಲ್ಲಿ ಕಲ್ಲು ಉಂಟಾಗಿದ್ದರೆ ಅದಕ್ಕೆ ಎಳನೀರಿಗಿಂತ ಉತ್ತಮವದ ಆಹಾರ ಇನ್ನೊಂದಿಲ್ಲ. ಏಕೆಂದರೆ ಎಳನೀರಿನಲ್ಲಿರುವ ಪೊಟ್ಯಾಶಿಯಂ ಈ ಲವಣಗಳನ್ನು ಕರಗಿಸಿಕೊಂಡು ಮೂತ್ರಪಿಂಡಗಳನ್ನು ಕಲ್ಲುಗಳಿಂದ ಮುಕ್ತಿಗೊಳಿಸುತ್ತದೆ.

ಸಕ್ಕರೆ ಕಾಯಿಲೆ
ಸಾಮಾನ್ಯವಾಗಿ ಸಿಹಿಯಾಗಿರುವ ಪದಾರ್ಥ ಹಾಗೂ ನೀರೆಂದರೆ ಮದುಮೇಹಿಗಳು ದೂರ ಉಳಿಯುವುದುಂಟು. ಆದರೆ, ಎಳನೀರು ಬ್ಲಡ್ ಶುಗರ'ನ್ನು ನಿಯಂತ್ರಿಸುತ್ತದೆ.  ಎಳನೀರಿನಲ್ಲಿ ಮೆಗ್ನೀಸಿಯಮ್ ಹೇರಳವಾಗಿದ್ದು, ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಮತ್ತು ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಮೂತ್ರಸೋಂಕು
ಎಳನೀರು ಮೂತ್ರವರ್ಧಕ ಎಂದು ಪರಿಗಣಿಸಲಾಗಿದೆ. ಇದು ಮೂತ್ರದ ಮೂಲಕ ವಿಷಕಾರಿ ಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ನೀವು ಎಳನೀರನ್ನು ಕುಡಿಯುವಾಗ ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬಹುದು, ಆದರೆ ಅದು ಮೂತ್ರದ ಸೋಂಕನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ