ಶೀಘ್ರ ತೂಕ ಕಳೆದುಕೊಳ್ಳಲು ಸಹಕಾರಿ!

ಮಂಗಳವಾರ, 9 ನವೆಂಬರ್ 2021 (10:13 IST)
ತೂಕ ಇಳಿಕೆಯಲ್ಲಿ ಯಶಸ್ವಿಯಾದವರು ಇದನ್ನು ಅಷ್ಟು ಸುಲಭವಾಗಿ ಏನೂ ಪಡೆದಿರುವುದಿಲ್ಲ, ಹಲವಾರು ದಿನಗಳ ಸತತ ಪರಿಶ್ರಮ ಹಾಗೂ ಕಟ್ಟುನಿಟ್ಟಿನ ವ್ಯಾಯಾಮ ಮತ್ತು ಆಹಾರಕ್ರಮವನ್ನು ಅನುಸರಿಸಿರುತ್ತಾರೆ.
ಈ ವ್ಯಕ್ತಿಗಳು ತಾವು ಸೇವಿಸುವ ಆಹಾರದ ಕ್ಯಾಲೋರಿಗಳ ಬಗ್ಗೆ ಹೆಚ್ಚಿನ ಅಸ್ಥೆ ವಹಿಸಬೇಕಾಗುತ್ತದೆ.
ದೇಹದ ಅನಗತ್ಯ ಕಲ್ಮಶಗಳು ನಿವಾರಣೆಯಾದರೆ, ತೂಕ ಇಳಿಕೆಯ ಪ್ರಯತ್ನಗಳು ಇನ್ನಷ್ಟು ಫಲಪ್ರದ ಹಾಗೂ ಶೀಘ್ರವಾಗಿ ನೆರವೇರಲಿವೆ. ದೇಹದ ಕಲ್ಮಶಗಳನ್ನು ನಿವಾರಿಸುವ (ಡಿಟಾಕ್ಸ್ ಡ್ರಿಂಕ್) ಪಾನೀಯ ಅಥವಾ ಪಾನಕಗಳಲ್ಲಿ ನಿಂಬೆರಸ ಮತ್ತು ಬೆಲ್ಲದಿಂದ ತಯಾರಿಸಿದ ಪಾನಕ ಪ್ರಮುಖ ಸ್ಥಾನ ಪಡೆಯುತ್ತದೆ. ಇವೆರಡೂ ನಮ್ಮ ಅಡುಗೆ ಮನೆಯಲ್ಲಿ ಸದಾ ಲಭ್ಯವಿರುವ ಸಾಮಾಗ್ರಿಗಳೇ ಆಗಿವೆ. ಕಲ್ಮಶ ನಿವಾರಣೆಯ ಇತರ ಪಾನಕಗಳೆಂದರೆ ಜೀರಿಗೆ ನೀರು ಹಾಗೂ ಸೌಂಫ್ ಅಥವಾ ದೊಡ್ಡ ಜೀರಿಗೆಯ ನೀರು. ಇವನ್ನು ಆಗಾಗ ಬದಲಿಸಿಕೊಳ್ಳುತ್ತಾ ಸೇವಿಸುತ್ತಿದ್ದರೆ ಹೆಚ್ಚಿನ ಪ್ರಯೋಜನ ಪಡೆಯಬಹುದು.
ಬೆಲ್ಲ ನೈಸರ್ಗಿಕ ಸಕ್ಕರೆಯಾಗಿದೆ ಹಾಗೂ ನಿಂಬೆರಸ ನೈಸರ್ಗಿಕ ಆಮ್ಲವಾಗಿದೆ. ಇವೆರಡರ ಮಿಶ್ರಣ ಉತ್ತಮ ಕಲ್ಮಶನಿವಾರಕ ಹಾಗೂ ಚೇತೋಹಾರಿಯಾಗಿದೆ. ಇವೆರಡೂ ಸಾಮಾಗ್ರಿಗಳ ಪ್ರಯೋಜನಗಳನ್ನು ಪ್ರತ್ಯೇಕವಾಗಿ ನೋಡೋಣ
ಬೆಲ್ಲ

ಇದರಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿದ್ದು ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ಬಳಲಿದ ದೇಹಕ್ಕೆ ಈ ಆಂಟಿ ಆಕ್ಸಿಡೆಂಟುಗಳು ಹೆಚ್ಚಿನ ಚೈತನ್ಯವನ್ನು ಒದಗಿಸುತ್ತವೆ. ಇದೇ ಕಾರಣಕ್ಕೆ ಬೇಸಿಗೆಯಲ್ಲಿ ಬಿಸಿಲಿನ ಝಳ ಕಡಿಮೆಗೊಳಿಸಲು ತಣ್ಣೀರಿನೊಂದಿಗೆ ಬೆಲ್ಲವನ್ನು ಸೇವಿಸಬೇಕು. ಬೆಲ್ಲ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ, ದೇಹದ ಕಲ್ಮಶಗಳನ್ನು ನಿವಾರಿಸುತ್ತದೆ ಹಾಗೂ ತೂಕ ಇಳಿಕೆಗೂ ಸಹಕರಿಸುತ್ತದೆ.
ನಿಂಬೆ ರಸ

ಇದೊಂದು ಸಿಟ್ರಿಕ್ ಆಮ್ಲದ ಅತ್ಯುತ್ತಮ ಮೂಲವಾಗಿದೆ ಹಾಗೂ ವಿಟಮಿನ್ ಸಿ ನಿಂದ ಸಮೃದ್ಧವಾಗಿದೆ. ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವ ಜೊತೆಗೇ ದೇಹದಲ್ಲಿ ಆರ್ದ್ರತೆಯನ್ನು ಹೆಚ್ಚಿಸಲು, ತ್ವಚೆಯ ಆರೋಗ್ಯ ಸುಧಾರಿಸಲು, ಜೀರ್ಣಕ್ರಿಯೆ ಉತ್ತಮಗೊಳಿಸಲು, ಹೃದ್ರೋಗ ಆವರಿಸುವ ಸಾಧ್ಯತೆ ತಗ್ಗಿಸಲು, ಹೃದಯದ ಆರೋಗ್ಯ ವೃದ್ದಿಸಲು ಹಾಗೂ ಮುಖ್ಯವಾಗಿ ಕೊಬ್ಬನ್ನು ಬಳಸಿಕೊಳ್ಳುವ ಮೂಲಕ ತೂಕ ಇಳಿಕೆ ಮತ್ತು ತೂಕ ನಿರ್ವಹಣೆಗೆ ನೆರವಾಗುತ್ತದೆ.
ಒಂದು ಲೋಟ ನೀರಿನಲ್ಲಿ ಒಂದು ಚಿಕ್ಕ ತುಂಡು ಬೆಲ್ಲವನ್ನು ಹಾಕಿ ನೀರನ್ನು ಕುದಿಸಿ. ಬೆಲ್ಲ ಪೂರ್ಣ ಕರಗಿದ ಬಳಿಕ ಈ ನೀರನ್ನು ಸೋಸಿ ತಣಿಯಲು ಬಿಡಿ. ನೀರು ಸಾಮಾನ್ಯ ತಾಪಮಾನಕ್ಕೆ ಇಳಿದ ಬಳಿಕ ಒಂದು ದೊಡ್ಡ ಚಮಚದಷ್ಟು ನಿಂಬೆರಸವನ್ನು ಇದಕ್ಕೆ ಸೇರಿಸಿ. ಈ ನೀರನ್ನು ಪ್ರತಿದಿನ ಬೆಳಗ್ಗಿನ ಮೊದಲ ಆಹಾರವಾಗಿ ಸೇವಿಸಿ. ನಂತರ ಮುಕ್ಕಾಲು ಘಂಟೆ ಏನನ್ನೂ ಸೇವಿಸದಿರಿ ಹಾಗೂ ನಿಮ್ಮ ನಿತ್ಯದ ನಡಿಗೆ ಅಥವಾ ವ್ಯಾಯಾಮಗಳನ್ನು ನಿರ್ವಹಿಸಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ