ಸ್ಟ್ರಾಂಗ್ ಕಾಫಿ ಕುಡಿಯಲು ಮಾತ್ರವಲ್ಲ, ತ್ವಚೆಯ ಆರೈಕೆಗೂ ಸೈ…!
ಮಂಗಳವಾರ, 20 ಜುಲೈ 2021 (19:22 IST)
ಚರ್ಮಕ್ಕೆ ಕಾಫಿ ಎಷ್ಟು ಪ್ರಯೋಜನಕಾರಿ ಎಂದು ನೀವು ಕೇಳಿದ್ದೀರಾ, ಏಕೆಂದರೆ ಕಾಫಿಯಿಂದ ಮಾಡಿದ ಫೇಸ್ ಪ್ಯಾಕ್ , ಸ್ಕ್ರಬ್ ಮುಖಕ್ಕೆ ಹೊಳಪು ತರುತ್ತದೆ. ಹಾಗೆಯೇ ಇನ್ನು ಸಾಕಷ್ಟು ಪ್ರಯೋಜನಗಳಿವೆ. ಆದ್ದರಿಂದ ಇಂದು ನಾವು ಕಾಫಿಯನ್ನು ತ್ವಚೆಗೆ ಬಳಸುವ ವಿಧಾನ ಕೊಟ್ಟಿದ್ದೇವೆ.
ವಿಶ್ವದಾದ್ಯಂತ ಕಾಫಿ ಕುಡಿಯವವರ ಸಂಖ್ಯೆ ತುಸು ಹೆಚ್ಚೇ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಚರ್ಮದ ರಕ್ಷಣೆಗೆ ಪರಿಹಾರವಾಗಿ ಹೆಚ್ಚು ಖ್ಯಾತಿಯನ್ನು ಪಡೆಯುತ್ತಿದೆ. ಕಾಫಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ಆರೋಗ್ಯಕರ ಚರ್ಮದ ಕೋಶಗಳನ್ನು ಹಾನಿಗೊಳಿಸುವ ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಡಾರ್ಕ್ ಸರ್ಕಲ್ಗಳಿಂದ ಹಿಡಿದು ಮೊಡವೆಗಳ ತನಕ ನಿಮ್ಮ ಚರ್ಮದ ರಕ್ಷಣೆ ಮಾಡುವಲ್ಲಿ ಪ್ರಮುಖಪಾತ್ರವಹಿಸುತ್ತದೆ. ಹಾಗಾಗಿ ಇಂದು ಕಾಫಿಯನ್ನು ನೀವು ಯಾವೆಲ್ಲಾ ಸಮಸ್ಯೆಗಳಿಗೆ, ಹೇಗೆಲ್ಲಾ ಬಳಸಬಹುದು ಎಂದು ನೋಡೋಣ ಬನ್ನಿ… ಡಾರ್ಕ್ ಸರ್ಕಲ್ ನಿವಾರಣೆಗೆ
ಕಾಫಿಯಲ್ಲಿರುವ ಕೆಫೀನ್ ರಕ್ತನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ. ಕಾಫಿಯಲ್ಲಿ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ಗಳಿವೆ. ಇದು ಕಣ್ಣುಗಳ ಅಡಿಯಲ್ಲಿನ ಕಪ್ಪು ಕಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈಗ ಡಾರ್ಕ್ ಸರ್ಕಲ್ ತೊಲಗಿಸಲು ಕಾಫಿಯನ್ನು ಬಳಸುವುದು ಹೇಗೆಂದು ನೋಡೋಣ ಬನ್ನಿ. ನೀವು ಮಾಡಬೇಕಾಗಿರುವುದು ಇಷ್ಟೇ…ಒಂದು ಟೇಬಲ್ ಸ್ಪೂನ್ ಕಾಫಿ ಪುಡಿಯನ್ನು ಒಂದು ಟೀಚಮಚ ಜೇನುತುಪ್ಪ ಮತ್ತು ಕೆಲವು ಹನಿ ವಿಟಮಿನ್ ಇ ಎಣ್ಣೆಯೊಂದಿಗೆ ಬೆರೆಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಕಣ್ಣುಗಳ ಕೆಳಗೆ ಎಚ್ಚರಿಕೆಯಿಂದ ಹಚ್ಚಿ. 15 ನಿಮಿಷಗಳ ನಂತರ ಅದನ್ನು ತೊಳೆಯಿರಿ. ಮೊಡವೆಗೆ ಸೂಕ್ತ ಪರಿಹಾರ
ಕಾಫಿಯನ್ನು ನಿಯಮಿತವಾಗಿ ಬಳಸುವುದರಿಂದ ಬ್ಯಾಕ್ಟೀರಿಯಾದಿಂದ ಉಂಟಾಗಿರುವ ಮೊಡವೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಏಕೆಂದರೆ ಕಾಫಿಯಲ್ಲಿ ಸಿಜಿಎ ಸಮೃದ್ಧವಾಗಿದೆ. ಇದು ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಮೊಡವೆಯನ್ನು ತೊಲಗಿಸಲು ನೀವು ಕಾಫಿಯನ್ನು ಹೀಗೆ ಬಳಸಬಹುದು…
3 ಟೇಬಲ್ ಸ್ಪೂನ್ ಗ್ರೌಂಡ್ ಕಾಫಿ ಮತ್ತು 2 ಟೇಬಲ್ ಸ್ಪೂನ್ ಕಂದು ಸಕ್ಕರೆ ಮಿಶ್ರಣ ಮಾಡಿ. ಈ ಕಾಫಿ ಮಿಶ್ರಣಕ್ಕೆ 3 ಟೇಬಲ್ ಸ್ಪೂನ್ ತೆಂಗಿನ ಎಣ್ಣೆಯನ್ನು ಸೇರಿಸಿ, ಚೆನ್ನಾಗಿ ಬೆರೆಸಿ ದಪ್ಪಗೆ ಸ್ಕ್ರಬ್ ಮಾಡಿ. ಈ ಸ್ಕ್ರಬ್ ಅನ್ನು ನಿಮ್ಮ ಮುಖದಾದ್ಯಂತ ಉಜ್ಜಿಕೊಳ್ಳಿ, ಕಣ್ಣುಗಳಂತಹ ಸೂಕ್ಷ್ಮ ಜಾಗದಿಂದ ದೂರವಿರಿ. ಇದನ್ನು 10 ನಿಮಿಷಗಳ ಕಾಲ ಬಿಟ್ಟು ಶುದ್ಧ ನೀರಿನಿಂದ ತೊಳೆಯಿರಿ. ನ್ಯಾಚುರಲ್ ಆಂಟಿ ಏಜಿಂಗ್
ಕಾಫಿ ಮಾಸ್ಕ್ ಅನ್ನು ನೇರವಾಗಿ ಚರ್ಮದ ಮೇಲೆ ಹಚ್ಚುವುದರಿಂದ ಸೂರ್ಯನ ಕಲೆಗಳು, ಕೆಂಪು ಮತ್ತು ಸೂಕ್ಷ್ಮ ರೇಖೆಗಳು ಕಡಿಮೆಯಾಗುತ್ತದೆ. ಒಂದು ಬೌಲ್ನಲ್ಲಿ ಕಾಫಿ ಪುಡಿ, ಕೋಕೋ ಪೌಡರ್ ಹಾಕಿ ಮಿಶ್ರಣ ಮಾಡಿ. ನಂತರ ಸ್ವಲ್ಪ ಪ್ರಮಾಣದಲ್ಲಿ ಹಾಲು ಸೇರಿಸಿ ಫೇಸ್ ಮಾಸ್ಕ್ ಮಾಡಿ. ಈ ಮಿಶ್ರಣಕ್ಕೆ 2 ಹನಿ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ ಮುಖಕ್ಕೆ ಹಚ್ಚಿ. ಇದನ್ನು 20 ನಿಮಿಷಗಳ ಕಾಲ ಬಿಡಿ ಮತ್ತು ಶುದ್ಧ ನೀರಿನಿಂದ ತೊಳೆಯಿರಿ. ನೀವು ಈ ಮಿಶ್ರಣವನ್ನು ಫ್ರಿಜ್ನಲ್ಲಿ 3 ದಿನಗಳವರೆಗೆ ಸಂಗ್ರಹಿಸಬಹುದು. ಸೆಲ್ಯುಲೈಟ್ ಕಡಿತ
ಕಾಫಿಯಲ್ಲಿರುವ ಕೆಫೀನ್, ಚರ್ಮದ ಕೆಳಗೆ ರಕ್ತನಾಳಗಳನ್ನು ಹಿಗ್ಗಿಸುವ ಮೂಲಕ ಮತ್ತು ಒಟ್ಟಾರೆ ರಕ್ತದ ಹರಿವನ್ನು ಸುಧಾರಿಸುವ ಮೂಲಕ ಸೆಲ್ಯುಲೈಟ್ ಕಡಿತಕ್ಕೆ ಸಹಾಯ ಮಾಡುತ್ತದೆ. ಮುಖದ ಕಾಂತಿಗಾಗಿ
ಒಂದು ಬಟ್ಟಲಿನಲ್ಲಿ 1/4 ಕಪ್ ಕಾಫಿ ಗ್ರೌಂಡ್ಸ್ ಮತ್ತು 3 ಟೇಬಲ್ ಸ್ಪೂನ್ ಅಲೋವೆರಾ ಜೆಲ್ ಮಿಶ್ರಣ ಮಾಡಿ ಸ್ಕ್ರಬ್ ರೆಡಿಯಾಗುತ್ತದೆ. ಈ ಸ್ಕ್ರಬ್ ಅನ್ನು ನಿಮ್ಮ ಮುಖ ಅಥವಾ ದೇಹಕ್ಕೆ ಹಚ್ಚಿ. ಇದನ್ನು 10 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. ನಂತರ ಶುದ್ಧ ನೀರಿನಿಂದ ತೊಳೆಯಿರಿ. ಅಲೋವೆರಾ ಜೆಲ್ ಅತ್ಯಂತ ಹಿತವಾದದ್ದು ಮತ್ತು ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಈ ಸ್ಕ್ರಬ್ನೊಂದಿಗೆ ಉತ್ತಮ ಮಸಾಜ್ ಜೀವಕೋಶಗಳನ್ನು ಉತ್ತೇಜಿಸುತ್ತದೆ ಮತ್ತು ಚರ್ಮಕ್ಕೆ ಆರೋಗ್ಯಕರ ಮತ್ತು ನೈಸರ್ಗಿಕ ಹೊಳಪನ್ನು ನೀಡುತ್ತದೆ. ಇದನ್ನು ಹಚ್ಚಿ, ಹಲವಾರು ವಾರಗಳ ನಂತರವೂ ನೀವು ಬಯಸಿದ ಫಲಿತಾಂಶ ಸಿಗದಿದ್ದರೆ ನಿಮ್ಮ ವೈದ್ಯರನ್ನು ಕಾಣುವುದು ಒಳ್ಳೆಯದು. ಹಾಗೆಯೇ ಅದು ಕಾಫಿ ಆಧಾರಿತವಾಗಲಿ ಅಥವಾ ಇಲ್ಲದಿರಲಿ ಯಾವುದೇ ಹೊಸ ಪರಿಹಾರ ಕಂಡುಕೊಳ್ಳುವ ಮೊದಲು ಕನಿಷ್ಠ ಕೆಲವು ವಾರಗಳ ಕಾಲವಾದರೂ, ಪ್ರಸ್ತುತ ಅನುಸರಿಸುತ್ತಿರುವ ಪರಿಹಾರ ಪ್ರಯತ್ನಿಸಿ, ತ್ವಚೆಯ ಆರೈಕೆ ಮಾಡಲು ಮರೆಯದಿರಿ.