ನೀವು ಮೊಸರನ್ನು ಕೇವಲ ಆಹಾರದ ಪ್ರಮುಖ ಭಾಗ ಎಂದು ಭಾವಿಸಿದ್ದರೆ ಅದು ತಪ್ಪು. ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮತ್ತು ಪ್ರೋಬಯಾಟಿಕ್ ಸಮೃದ್ಧವಾಗಿದೆ.
ಮೊಸರು ನಿಮ್ಮ ಚರ್ಮ ಮತ್ತು ಕೂದಲಿಗೆ ಒಳ್ಳೆಯದು ಎಂದು ನಿಮಗೆ ಗೊತ್ತಾ? ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಸತ್ತ ಚರ್ಮದ ಕೋಶಗಳನ್ನು ತೆಗದು ಹಾಕುತ್ತದೆ ಮತ್ತು ರಂಧ್ರಗಳನ್ನು ಬಿಗಿಗೊಳಿಸುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಹೀಗಾಗಿ ಮೊಸರನ್ನು ಬಳಸಿ ನೀವು ಮೊಡವೆಗಳಿಂದ ಮುಕ್ತಿ ಪಡೆಯಬಹುದು ಮತ್ತು ಇದು ಸುಕ್ಕುಗಳನ್ನು ನಿವಾರಿಸಿ ಸೌಂದರ್ಯವನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ. ಹಾಗಾದ್ರೆ ಚರ್ಮದ ಮೇಲೆ ಮೊಸರಿನ ಆರೋಗ್ಯ ಪ್ರಯೋಜನಗಳೇನು ಎಂಬುದು ಇಲ್ಲಿದೆ. ಸೂರ್ಯನ ಕಿರಣಗಳಿಂದ ರಕ್ಷಣೆ ಮಾಡುತ್ತದೆ
ಮೊಸರು ಆರ್ಧ್ರಕ ಪರಿಣಾಮವನ್ನು ಹೊಂದಿದೆ ಮತ್ತು ಅದರಲ್ಲಿರುವ ಸತುವು ಉರಿಯೂತವನ್ನು ತಡೆಯುವ ಗುಣಗಳನ್ನು ಹೊಂದಿದ್ದು ಅದು ಸೂರ್ಯನ ಕಿರಣಗಳಿಂದ ಹಾನಿಗೊಳಗಾದ ಚರ್ಮವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಕಪ್ಪಾದ ಚರ್ಮಕ್ಕೆ ಮೊಸರನ್ನು ಹಚ್ಚಿ 20 ನಿಮಿಷಗಳ ತೊಳೆಯುವುದು ಉತ್ತಮ ಪರಿಹಾರ ನೀಡುತ್ತದೆ. ಒಂದು ಬಟ್ಟಲಿನಲ್ಲಿ ಅರ್ಧ ಕಪ್ ಮೊಸರನ್ನು ತೆಗೆದುಕೊಂಡು ಒಂದು ಟೊಮೆಟೊ ಮತ್ತು ಒಂದು ಸೌತೆಕಾಯಿಯ ರಸದೊಂದಿಗೆ ಮಿಶ್ರಣ ಮಾಡಿ. ಇದನ್ನು ಹಾಳಾಗಿರುವ ಚರ್ಮಕ್ಕೆ ಹಚ್ಚಿ 20 ನಿಮಿಷಗಳ ನಂತರ ತೊಳೆಯಿರಿ. ಚರ್ಮದ ತೇವಾಂಶ ಉಳಿಸಲು ಸಹಾಯ ಮಾಡುತ್ತದೆ
ನೀವು ಒಣ ಮುಖದ ಚರ್ಮದ ಸಮಸ್ಯೆಯನ್ನು ಹೊಂದಿದ್ದರೆ, ನಯವಾದ ಮತ್ತು ಮೃದುವಾದ ಚರ್ಮಕ್ಕೆ ನೀವು ಮೊಸರನ್ನು ಬಳಸಿ. ಇದು ಮಾಯಿಶ್ಚರೈಸಿಂಗ್ ಕ್ರೀಮ್ ರೀತಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ನೀವು ಮಾಡಬೇಕಾಗಿರುವುದಿಷ್ಟೇ, ಒಂದು ಚಮಚ ಕೋಕೋ ಮತ್ತು ಒಂದು ಚಮಚ ಜೇನುತುಪ್ಪ ತೆಗೆದುಕೊಂಡು ಅದಕ್ಕೆ 4 ಚಮಚ ಮೊಸರು ಸೇರಿಸಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಸಮವಾಗಿ ಹಚ್ಚಿ. 30 ನಿಮಿಷಗಳ ನಂತರ ಅದನ್ನು ತಣ್ಣನೇಯ ನೀರಿನಿಂದ ತೊಳೆಯಿರಿ ಮತ್ತು ನಂತರ ಮೃದುವಾದ ಟವೆಲ್ನಿಂದ ತೊಳೆಯಿರಿ. ಉತ್ತಮ ಫಲಿತಾಂಶಗಳನ್ನು ಪಡೆಯಲು ವಾರಕ್ಕೆ ಮೂರು ಬಾರಿ ಈ ಮಾಸ್ಕ್ ಬಳಸಿ. ನಿಮ್ಮ ಚರ್ಮ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ
ಮೊಸರು ಒಣ ಮತ್ತು ತುರಿಕೆಯ ಚರ್ಮವನ್ನು ತಡೆದು, ಈ ಸಮಸ್ಯೆಗೆ ಚಿಕಿತ್ಸೆ ನೀಡುತ್ತದೆ. ಇದು ನೈಸರ್ಗಿಕ ಸೌಮ್ಯವಾದ ಎಫ್ಫೋಲಿಯಂಟ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಶುಷ್ಕ ಚರ್ಮವನ್ನು ತೊಡೆದುಹಾಕುತ್ತದೆ. ಇದರ ಆರ್ಧ್ರಕ ಗುಣಗಳು ನಿಮ್ಮ ಚರ್ಮವನ್ನು ಮೃದುವಾಗಿರಿಸುತ್ತದೆ. ಆ್ಯಂಟಿ ಆಕ್ಸಿಡೆಂಟ್ ಮತ್ತು ಉರಿಯೂತದ ಗುಣಲಕ್ಷಣಗಳು ಶುಷ್ಕ ಮತ್ತು ತುರಿಕೆಯ ಚರ್ಮಕ್ಕೆ ಪರಿಹಾರ ನೀಡುತ್ತದೆ. ಮೊಸರನ್ನು ನಿಮ್ಮ ಚರ್ಮಕ್ಕೆ ಹಚ್ಚಿ ಮಸಾಜ್ ಮಾಡಿ ಮತ್ತು 10 ನಿಮಿಷಗಳ ಕಾಲ ಬಿಡಿ. ನಂತರ ತೊಳೆಯಿರಿ. ಮುಖದ ಕಲೆಗಳನ್ನು ಕಡಿಮೆ ಮಾಡುತ್ತದೆ
ಮೊಸರು ಸೌಮ್ಯವಾದ ಬ್ಲೀಚಿಂಗ್ ಗುಣಗಳನ್ನು ಹೊಂದಿದ್ದು, ಇದು ನಿಮ್ಮ ಮುಖದ ಮೇಲಿನ ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಲ್ಯಾಕ್ಟಿಕ್ ಆಸಿಡ್ ನೈಸರ್ಗಿಕ ಕ್ಲೆನ್ಸರ್ ಮತ್ತು ಎಕ್ಸ್ಫೋಲಿಯೇಟರ್ ಆಗಿ ಕೆಲಸ ಮಾಡುತ್ತದೆ ಮತ್ತು ನಿಮ್ಮ ಚರ್ಮದ ಯಾವುದೇ ಕಲೆಗಳನ್ನು ಕಡಿಮೆ ಮಾಡಲು ಸಹಕಾರಿ. ನೀವು 1 ನಿಂಬೆಹಣ್ಣಿನ ರಸದೊಂದಿಗೆ 3 ಚಮಚವನ್ನು ಮೊಸರು ಬೆರಸಿ ಅದನ್ನ ಫೇಸ್ ಪ್ಯಾಕ್ ಮಾಡಿ, ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷಗಳ ನಂತರ, ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಮೊಡವೆ ಪರಿಹಾರ ನೀಡುತ್ತದೆ
ಮೊಸರಿನಲ್ಲಿರುವ ನೈಸರ್ಗಿಕ ಶಿಲೀಂಧ್ರ ವಿರೋಧಿ ಗುಣಗಳು ಮೊಡವೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಮೊಸರಿನಲ್ಲಿರುವ ಸತುವು ಉರಿಯೂತ ನಿವಾರಕ ಅಂಶಗಳನ್ನು ಹೊಂದಿದೆ. ನೀವು ಮೊಡವೆಗಳಿಂದ ಮುಕ್ತಿ ಪಡೆಯಲು ಮೊಸರಿನ ಮಾಸ್ಕ್ ಬಳಕೆ ಮಾಡುವುದು ಉತ್ತಮ. ಒಂದು ಚಮಚ ಮೊಸರನ್ನು 1 ಟೀಚಮಚ ಅರಿಶಿನ ಪುಡಿಯೊಂದಿಗೆ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಅಥವಾ ಕೇವಲ ಮೊಡವೆ ಇರುವ ಜಾಗದಲ್ಲಿ ಹಚ್ಚಿ ಮತ್ತು 20 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ. ಉತ್ತಮ ಪ್ರಯೋಜನಕ್ಕಾಗಿ ವಾರಕ್ಕೆ ಮೂರು ಬಾರಿ ಬಳಕೆ ಮಾಡಿ.