ಬೆಂಗಳೂರು: ಇಂದು ಹಿಂದೂ ಆಸ್ತಿಕರು ರಥ ಸಪ್ತಮಿ ದಿನವಾಗಿ ಆಚರಣೆ ಮಾಡುತ್ತಾರೆ. ಆದರೆ ರಥಸಪ್ತಮಿ ಹಬ್ಬದಂದು ಯಾರನ್ನು ಆರಾಧಿಸಬೇಕು? ಇದರ ಮಹತ್ವೇನು ತಿಳಿಯೋಣ.
ನಮ್ಮ ನಿಮ್ಮೆಲ್ಲರ ದಿನ ಬೆಳಗುವ ಸೂರ್ಯನಿಗೆ ಇಂದು ಜನ್ಮದಿನದ ಸಂಭ್ರಮ.ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿಯನ್ನು ರಥ ಸಪ್ತಮಿ ಅಥವಾ ಮಾಘ ಸಪ್ತಮಿ ಎಂದು ಆಚರಿಸಲಾಗುತ್ತದೆ. ಇಂದು ಸೂರ್ಯದೇವನನ್ನೇ ಆರಾಧನೆ ಮಾಡುವ ಪ್ರಮುಖ ದಿನವಾಗಿದೆ. ಇದನ್ನು ಸೂರ್ಯ ಜಯಂತಿ ಎಂದೂ ಕರೆಯಲಾಗುತ್ತದೆ. ಸೂರ್ಯ ದೇವನ ಆರಾಧನೆ ಮಾಡಿದರೆ ಉತ್ತಮ.
ಬೆಳಿಗ್ಗೆಯೇ ಮಿಂದು ಶುದ್ಧರಾಗಿ ಉಪವಾಸವಿದ್ದು, ಸೂರ್ಯ ದೇವನ ಆರಾಧನೆ ಮಾಡಿದರೆ ಇದುವರೆಗಿನ ಪಾಪ ಕೃತ್ಯಗಳು ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಸೂರ್ಯ ಹುಟ್ಟುವ ಮೊದಲೇ ಸ್ನಾನಾದಿಗಳನ್ನು ಪೂರೈಸಿ ಬಳಿಕ ಸೂರ್ಯನಮಸ್ಕಾರ ಮಾಡಬೇಕು. ಸೂರ್ಯದೇವನು ಏಳು ಕುದುರೆಗಳುಳ್ಳ ರಥದಲ್ಲಿ ಉತ್ತರಾಯಣದ ಕಡೆಗೆ ಚಲಿಸುವ ದಿನವಾಗಿದೆ. ಋಷಿವರ್ಯರಾದ ಕಶ್ಯಪ ಮತ್ತು ಅದಿತಿ ದಂಪತಿ ಸೂರ್ಯ ದೇವನ ಅನುಗ್ರಹದಿಂದ ಸಂತಾನ ಪಡೆದರು ಎಂಬ ನಂಬಿಕೆಯಿದೆ. ಇನ್ನೊಂದು ದೃಷ್ಟಾಂತದ ಪ್ರಕಾರ ರಾಜ ಯಶೋವರ್ಮ ಸೂರ್ಯದೇವನನ್ನು ತಪಸ್ಸು ಮಾಡಿ ಆತನಂತೆ ತೇಜಸ್ವಿಯಾದ ಪುತ್ರ ಸಂತಾನವನ್ನು ಪಡೆದನು ಎನ್ನಲಾಗಿದೆ.
ಇಂದು ಸೂರ್ಯದೇವನ ಜನನವಾದ ದಿನ ಎಂಬ ನಂಬಿಕೆಯಿದೆ. ಇಂದು ಸೂರ್ಯದೇವನನ್ನು ಭಕ್ತಿಯಿಂದ ಆರಾಧಿಸಿದರೆ ಸಂತಾನಾಪೇಕ್ಷಿತ ದಂಪತಿಗಳಿಗೆ ಸೂರ್ಯದೇವನು ವರ ಕರುಣಿಸುತ್ತಾನೆ ಎಂಬ ನಂಬಿಕೆಯಿದೆ. ಅಲ್ಲದೆ ಆಯುಷ್ಯ, ಆರೋಗ್ಯ ವೃದ್ಧಿಗಾಗಿ ವಸ್ತ್ರ, ಧಾನ್ಯ ದಾನ ಮಾಡಿದರೆ ಒಳಿತಾಗುತ್ತದೆ.