ಗಣೇಶ ಹಬ್ಬದ ಮುನ್ನಾದಿನ ಗೌರಿ ಹಬ್ಬ ಬರುತ್ತದೆ. ಈ ಬಾರಿ ಗಣೇಶ ಹಬ್ಬ ಆಗಸ್ಟ್ 27 ಕ್ಕೆ ಇದ್ದರೆ ಅದರ ಹಿಂದಿನ ದಿನ ಪ್ರತೀವರ್ಷದಂತೆ ಈ ವರ್ಷವೂ ಗೌರಿ ಹಬ್ಬ ಬರಲಿದೆ. ಅಂದರೆ ಆಗಸ್ಟ್ 26 ಕ್ಕೆ ಗೌರಿ ಹಬ್ಬವಿದೆ.
ಗೌರಿ ಹಬ್ಬವನ್ನು ವಿಶೇಷವಾಗಿ ಮಹಿಳೆಯರು ಆಚರಿಸುತ್ತಾರೆ. ವಿವಾಹ ಅಪೇಕ್ಷೆ ಹೊಂದಿರುವ ಕನ್ಯೆಯರು, ವೈವಾಹಿಕ ಜೀವನದಲ್ಲಿ ಸುಖ-ಶಾಂತಿಗಾಗಿ ಮಹಿಳೆಯರು ಗೌರಿ ಪೂಜೆಯನ್ನು ಮಾಡುವುದು ಶ್ರೇಷ್ಠವಾಗಿದೆ.
ಗೌರಿ ಹಬ್ಬಕ್ಕೆ ಏನೆಲ್ಲಾ ಬೇಕು?
ಗೌರಿ ಹಬ್ಬಕ್ಕೆ ಮುಂಚಿತವಾಗಿಯೇ ಹಣ್ಣು, ಹೂವು, ಅರಿಶಿನ ಕುಂಕುಮ, ವೀಳ್ಯದೆಲೆ, ತೆಂಗಿನಕಾಯಿ, ಸಿಹಿ ತಿಂಡಿಗಳನ್ನು ಎತ್ತಿಟ್ಟುಕೊಳ್ಳಿ. ಜೊತೆಗೆ ದೀಪ, ಅಗರಬತ್ತಿ ಸಂಗ್ರಹಿಸಿ. ಮನೆಯನ್ನು ಬೆಳಿಗ್ಗೆಯೇ ಸ್ವಚ್ಛ ಮಾಡಿ ರಂಗೋಲಿ ಹಾಕಿ ದೀಪ ಹಚ್ಚಿ.
ಕಲಶವಿಟ್ಟು ದೇವಿಗೆ ಪೂಜೆ ಮಾಡಬೇಕು. ದೇವಿಗೆ ಅರಿಶಿನ ಕುಂಕುಮ ಹಚ್ಚಿ ಹೂವಿನಿಂದ ಅರ್ಚನೆ ಮಾಡಬೇಕು. ಆರತಿ ಮಾಡುವಾಗ ದೇವಿಯ ಹಾಡು ಹೇಳಿ ಆರತಿ ಬೆಳಗಿ. ಮಹಿಳೆಯರು ವಿಶೇಷವಾಗಿ ಮುತ್ತೈದೆಯರಿಗೆ ಬಾಗಿನ ಕೊಡಬೇಕು. ವಿಶೇಷವಾಗಿ ಗೌರಿ ಪೂಜೆ ಮಾಡುವವರು ಉಪವಾಸವಿದ್ದು ಶುದ್ಧ ಮನಸ್ಕರಾಗಿ ಪೂಜೆ ಮಾಡಿದರೆ ಒಳಿತಾಗುತ್ತದೆ.