Saif Ali Khan: ಕಳ್ಳರಿಂದ ಮನೆಕೆಲಸದವರನ್ನು ರಕ್ಷಿಸಲು ಹೀರೋ ರೀತಿ ನುಗ್ಗಿದ ಸೈಫ್ ಅಲಿ ಖಾನ್ ಗೆ ಎಲ್ಲೆಲ್ಲಿ ಗಾಯವಾಗಿದೆ

Krishnaveni K

ಗುರುವಾರ, 16 ಜನವರಿ 2025 (09:17 IST)
ಮುಂಬೈ: ನಿನ್ನೆ ತಡರಾತ್ರಿ ಮನೆಗೆ ನುಗ್ಗಿದ್ದ ಕಳ್ಳರಿಂದ ಇರಿತಕ್ಕೊಳಗಾಗಿರುವ ನಟ ಸೈಫ್ ಅಲಿ ಖಾನ್ ಗೆ ಎಲ್ಲೆಲ್ಲಿ ಗಾಯವಾಗಿದೆ ಮತ್ತು ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ವಿವರ ಇಲ್ಲಿದೆ.

ನಟ ಸೈಫ್ ಅಲಿ ಖಾನ್ ಅವರ ಮುಂಬೈ ನಿವಾಸಕ್ಕೆ ನಿನ್ನೆ ತಡರಾತ್ರಿ ಕಳ್ಳರು ನುಗ್ಗಿದ್ದರು. ಅವರನ್ನು ತಡೆಯುವ ಯತ್ನದಲ್ಲಿ ಸೈಫ್ ಅಲಿ ಖಾನ್ ಗೆ ಚಾಕುವಿನಿಂದ ಇರಿಯಲಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಲಗಳ ಪ್ರಕಾರ ಸೈಫ್ ಗೆ ಒಟ್ಟು ಆರು ಬಾರಿ ಕಳ್ಳರು ಚಾಕುವಿನಿಂದ ಇರಿದಿದ್ದಾರೆ. ಅವರ ಕುತ್ತಿಗೆ ಬಳಿ, ಕೈ, ಗಲ್ಲ ಸೇರಿದಂತೆ ಸಿಕ್ಕ ಸಿಕ್ಕಲ್ಲೆಲ್ಲಾ ಗಾಯಗಳಾಗಿವೆ. ಇದೀಗ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವೈದ್ಯರು ಅವರಿಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಮೂಲಗಳ ಪ್ರಕಾರ ಕಿವಿ ಬಳಿ ಗಾಯವಾಗಿದೆ. ಹೆಗಲ ಮೇಲೆ 10 ಸೆ.ಮೀ. ನಷ್ಟು ಉದ್ದದ ಇರಿತವಾಗಿದೆ. ಕೈ ಮತ್ತು ಬೆನ್ನಿಗೂ ಗಾಯವಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ಬೆನ್ನಿನ ಭಾಗದಿಂದ ಚೂಪಾದ ವಸ್ತುವನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ಹೇಗಾಯ್ತು?
ಕಳ್ಳರು ಮನೆಗೆ ನುಗ್ಗಿ ಮನೆ ಕೆಲಸದವರ ಜೊತೆ ದಾಳಿಗಿಳಿದಿದ್ದರು. ಈ ವೇಳೆ ಎಚ್ಚರಗೊಂಡ ಸೈಫ್ ಮನೆಕೆಲಸವರನ್ನು ರಕ್ಷಿಸಲು ತಾವೇ ಮಧ್ಯಪ್ರವೇಶಿಸಿದರು ಎಂದು ಹೇಳಲಾಗುತ್ತಿದೆ. ಈ ವೇಳೆ ಕಳ್ಳ ನೇರವಾಗಿ ಸೈಫ್ ಮೇಲೆಯೇ ದಾಳಿ ನಡೆಸಿದ್ದಾನೆ. ಕಳ್ಳ ಏಕಾಂಗಿಯಾಗಿ ಬಂದಿದ್ದನೇ ಅಥವಾ ಜೊತೆಗೆ ಬೇರೆ ಯಾರಾದರೂ ಇದ್ದರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದೀಗ ಸೈಫ್ ಚೇತರಿಸಿಕೊಂಡ ಬಳಿಕ ಪೊಲೀಸರು ಅವರಿಂದ ವಿವರ ಪಡೆಯಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ