ಸಂಜಯ್ ದತ್ ಅವರ ಜೀವನಾಧಾರಿತ, ರಣಬೀರ್ ಕಪೂರ್ ಅವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ ಚಿತ್ರ 'ಸಂಜು' ಈಗಾಗಲೇ ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ. ಕೇವಲ ಮೂರು ವಾರಗಳಲ್ಲಿ ಬರೋಬ್ಬರಿ 300 ಕೋಟಿ ರೂಪಾಯಿಗಳನ್ನು ಗಳಿಸಿ ಭಾರತದ ಅತಿ ದೊಡ್ಡ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರವು ವಿಧು ವಿನೋದ್ ಚೋಪ್ರಾ ಮತ್ತು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಸಹ-ನಿರ್ಮಾಣವಾಗಿದೆ.
"ಚೀನಾದ ಅನೇಕ ಸಿನಿಮಾ ವಿತರಕರು ನಮ್ಮ ಬಳಿ ತಲುಪಿದ್ದಾರೆ. ಅವರು ಚಿತ್ರವನ್ನು ವೀಕ್ಷಿಸಿದ್ದಾರೆ ಮತ್ತು ಚಿತ್ರವನ್ನು ಅಲ್ಲಿ ಬಿಡುಗಡೆ ಮಾಡುವ ಕುರಿತು ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ನಾವು ಜಪಾನ್, ದಕ್ಷಿಣ ಕೊರಿಯಾ ಮುಂತಾದ ಕಡೆ ಚಿತ್ರವನ್ನು ಬಿಡುಗಡೆ ಮಾಡಲು ಫಾಕ್ಸ್ ಸ್ಟಾರ್ ಕಡೆ ನೋಡುತ್ತಿದ್ದೇವೆ" ಎಂದು ಫಾಕ್ಸ್ ಸ್ಟಾರ್ ಸ್ಟುಡಿಯೊದ ಸಿಇಒ ವಿಜಯ್ ಸಿಂಗ್ ಹೇಳಿದ್ದಾರೆ.
ಅಮೀರ್ ಖಾನ್ ಅವರ ದಂಗಲ್, ಸಲ್ಮಾನ್ ಖಾನ್ ಅವರ ಭಜರಂಗಿ ಭಾಯಿಜಾನ್ ಮತ್ತು ಇರ್ಫಾನ್ ಖಾನ್ ಅವರ ಹಿಂದಿ ಮೀಡಿಯಂ ಚಿತ್ರಗಳ ಅದ್ಭುತ ಯಶಸ್ಸಿನ ನಂತರ ಚೀನಾ ಭಾರತದ ಚಲನಚಿತ್ರಗಳಿಗೆ ದೊಡ್ಡ ಮಾರುಕಟ್ಟೆಯಾಗಿದೆ. ಹಾಗಾಗಿ 'ಸಂಜು' ಚಿತ್ರಕ್ಕೆ ಚೀನಾದಲ್ಲಿ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ರಣಬೀರ್ ಕಪೂರ್ ಸೇರಿದಂತೆ ಅನುಷ್ಕಾ ಶರ್ಮಾ, ಪರೇಶ್ ರಾವಲ್, ವಿಕ್ಕಿ ಕೌಶಲ್ ಮತ್ತು ಸೋನಮ್ ಕಪೂರ್ ಅವರನ್ನು ಮುಖ್ಯ ಭೂಮಿಕೆಯಲ್ಲಿ ಹೊಂದಿರುವ 'ಸಂಜು' 323 ಕೋಟಿ ರೂಪಾಯಿಗಳನ್ನು ಗಳಿಸಿ ಭಾರತದ ನಾಲ್ಕನೇ ಅತಿ ದೊಡ್ಡ ಚಲನಚಿತ್ರವಾಗಿ ಹೊರಹೊಮ್ಮಿದ್ದು ಇನ್ನೂ ಹೆಚ್ಚು ಗಳಿಸುವ ಸಾಧ್ಯತೆಗಳಿವೆ. ಇಂದು ಹೊಸ ಚಿತ್ರಗಳು ಬಿಡುಗಡೆಯಾಗಿದ್ದು ಅವುಗಳು 'ಸಂಜು' ಚಿತ್ರದ ಗಳಿಕೆಯ ಮೇಲೆ ಪರಿಣಾಮವನ್ನು ಬೀರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.