ಮನಿ ಲಾಂಡರಿಂಗ್ ಪ್ರಕರಣ; ನಟಿ ಜಾಕ್ವೆಲಿನ್ ಫರ್ನಾಂಡೀಸ್ರನ್ನು ಸಾಕ್ಷಿಯಾಗಿ ವಿಚಾರಣೆ

ಮಂಗಳವಾರ, 31 ಆಗಸ್ಟ್ 2021 (08:30 IST)
ನವ ದೆಹಲಿ (ಆಗಸ್ಟ್ 31); ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಇಂದು ಮನಿ ಲಾಂಡರಿಂಗ್ ಪ್ರಕರಣದ ಸಾಕ್ಷಿಯಾಗಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.

ಚುನಾವಣಾ ಆಯೋಗವನ್ನು ಒಳಗೊಂಡಿರುವ ಲಂಚದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸುಕೇಶ್ ಚಂದ್ರಶೇಖರ್ ನಡೆಸುತ್ತಿದ್ದ ಬಹುಕೋಟಿ ಸುಲಿಗೆ ಹಗರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ. 36 ವರ್ಷ ವಯಸ್ಸಿನ ಶ್ರೀಲಂಕಾ ನಟಿಯನ್ನು ಐದು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಆದರೆ, "ಆಕೆ ಆರೋಪಿಯಲ್ಲ, ಸುಕೇಶ್ ಚಂದ್ರಶೇಖರ್ ನಡೆಸುತ್ತಿದ್ದ ಬಹುಕೋಟಿ ಸುಲಿಗೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿ ವಿಚಾರಣೆ ನಡೆಸಲಾಗಿದೆ" ಎಂದು ಜಾರಿ ನಿರ್ದೇಶನಾಲಯದ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
ಆಗಸ್ಟ್ 24 ರಂದು, ತನಿಖಾ ಸಂಸ್ಥೆ ಚಂದ್ರಶೇಖರ್ ವಿರುದ್ಧದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈನ ಬಂಗಲೆಯಿಂದ 82.5 ಲಕ್ಷ ನಗದು ಮತ್ತು ಒಂದು ಡಜನ್ ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದೆ ಎಂದು ಮಾಹಿತಿ ನೀಡಿತ್ತು. ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಸುಮಾರು 200 ಕೋಟಿ ರೂ. ಸುಲಿಗೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (economic offences wing)  ಎಫ್ಐಆರ್ ದಾಖಲಿಸಿದೆ.
"ಸುಕೇಶ್ ಚಂದ್ರಶೇಖರ್ ಈ ವಂಚನೆಯ ಸೂತ್ರಧಾರ. ಆತ 17 ನೇ ವಯಸ್ಸಿನಿಂದಲೂ ಈ ಅಪರಾಧದಲ್ಲಿ ತೊಡಗಿದ್ದಾನೆ. ಆತನ ವಿರುದ್ಧ ಅನೇಕ ಎಫ್ಐಆರ್ ದಾಖಲಾಗಿವೆ. ಆತನನ್ನು ಪ್ರಸ್ತುತ ರೋಹಿಣಿ ಜೈಲಿನಲ್ಲಿ ಇರಿಸಲಾಗಿದೆ" ಎಂದು ಜಾರಿ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಲಾಗಿತ್ತು.
ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಜಗಂನ (ಎಐಎಡಿಎಂಕೆ) ‘ಅಮ್ಮ’ ಬಣದ ನಾಯಕ ಟಿಟಿವಿ ದಿನಕರನ್ ಅವರಿಂದ, ಪಕ್ಷದ ‘ಎರಡು ಎಲೆಗಳ’ ಚಿಹ್ನೆಯ ವಿವಾದಕ್ಕೆ ಸಂಬಂಧಿಸಿದಂತೆ ಚುನಾವಣಾ ಸಮಿತಿ ಅಧಿಕಾರಿಗಳಿಗೆ ಲಂಚ ನೀಡಲು ಸುಕೇಶ್ ಚಂದ್ರಶೇಖರ್ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಇತ್ತ, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮೊದಲ ಬಾರಿಗೆ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ಚಿತ್ರ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಪ್ರಸ್ತುತ ಬಾರೀ ಸದ್ದು ಮಾಡುತ್ತಿದೆ. ಈ ನಡುವೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಜಾರಿ ನಿರ್ದೆಶನಾಲಯ ಪ್ರಮುಖ ಪ್ರಕರಣದಲ್ಲಿ ಸಾಕ್ಷಿಯಾಗಿ ಪರಿಗಣಿಸಿರುವುದು ಮಹತ್ವ ಪಡೆದುಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ