ಇನ್ನು ಶ್ರೀಮಂತ ಎನ್ನಲು 30 ಲಕ್ಷ ಬೇಕು..!

ಸೋಮವಾರ, 6 ಜುಲೈ 2009 (21:05 IST)
ಸರಕಾರದ ಪ್ರಕಾರ ಇನ್ನು ಮುಂದೆ ಯಾರನ್ನೇ ಆಗಲಿ ಶ್ರೀಮಂತ ಎಂದು ಕರೆಯಬೇಕಾದರೆ ಆತ ದುಪ್ಪಟ್ಟು ಸಂಪಾದನೆ ಮಾಡಬೇಕು. ಅಂದರೆ ಆತ ಅಥವಾ ಸಂಸ್ಥೆಯು ವಾರ್ಷಿಕ 30 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಸಂಪಾದನೆ ಮಾಡಬೇಕು. 30 ಲಕ್ಷಕ್ಕಿಂತ ಹೆಚ್ಚು ಹಣ ಹೊಂದಿದವರು ಮಾತ್ರ ಐಶ್ವರ್ಯ ತೆರಿಗೆ ವ್ಯಾಪ್ತಿಗೆ ಬರಬೇಕು ಎಂದು ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಪ್ರಸಕ್ತ ಇರುವ ನಿಯಮಾವಳಿಗಳ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿ, ಹಿಂದೂ ಅವಿಭಕ್ತ ಕುಟುಂಬ ಮತ್ತು ಕಂಪನಿಯ ಒಟ್ಟು ವಾರ್ಷಿಕ ಆದಾಯ 15 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದ್ದರೆ ಅಂತವರಿಗೆ ಸಿರಿವಂತಿಕೆ ಬಾಬ್ತು ಶೇಕಡಾ ಒಂದು ತೆರಿಗೆ ವಿಧಿಸಲಾಗುತ್ತಿತ್ತು.

ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರು ಈ ಸಂಬಂಧ ಆಸ್ತಿ ತೆರಿಗೆ ನಿಯಮಾವಳಿಯಲ್ಲಿ ತಿದ್ದುಪಡಿ ಪ್ರಸ್ತಾಪವನ್ನು ಮಾಡಿದ್ದಾರೆ. ಇದರ ಪ್ರಕಾರ ಆರ್ಥಿಕ ವರ್ಷದ ಆರಂಭಿಕ ದಿನ ಅಂದರೆ 2010ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ 30 ಲಕ್ಷ ರೂಪಾಯಿಗಳನ್ನು ಮೀರುವ ಸಂಪತ್ತು ಹೊಂದಿದ್ದವರಿಗೆ ಶೇಕಡಾ ಒಂದರ ತೆರಿಗೆ ವಿಧಿಸಲಾಗುತ್ತದೆ.

ಇದರೊಂದಿಗೆ, ಸಂಪತ್ತು ತೆರಿಗೆಗೆ ಸಂಬಂಧಿಸಿದ ದುಪ್ಪಟ್ಟು ತೆರಿಗೆ ಪದ್ಧತಿಯನ್ನು ತಡೆಯುವುದಕ್ಕೆ ಸಂಬಂಧಿಸಿದ ಕೆಲವೊಂದು ನಿಯಮಾವಳಿಗಳಿಗೆ ತಿದ್ದುಪಡಿ ಪ್ರಸ್ತಾವವನ್ನೂ ವಿತ್ತ ಸಚಿವರು ಮುಂದಿಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ