ಈ ಬಾರಿ ಬಜೆಟ್‌ಗಳಲ್ಲಿ ಬಂಗಾಲದ್ದೇ ಕಾರುಬಾರು..!

ಶುಕ್ರವಾರ, 3 ಜುಲೈ 2009 (19:37 IST)
ಇಂದು ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ರೈಲ್ವೇ ಬಜೆಟ್ ಮಂಡಿಸಿದ್ದು, ಸೋಮವಾರ ವಿತ್ತ ಮಂತ್ರಿ ಪ್ರಣಬ್ ಮುಖರ್ಜಿ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಇದರೊಂದಿಗೆ 25 ವರ್ಷಗಳ ನಂತರ ಪಶ್ಚಿಮ ಬಂಗಾಲದ ಇಬ್ಬರು ಸಂಸದರು ಒಂದೇ ಅವಧಿಯಲ್ಲಿ ಬಜೆಟ್ ಮಂಡಿಸಿದ ದಾಖಲೆ ನಿರ್ಮಾಣವಾಗಲಿರುವುದು ವಿಶೇಷ.

ಈ ಹಿಂದೆ 1984ರಲ್ಲಿ ಬರ್ಖಾತ್ ಘನಿ ಖಾನ್ ಚೌಧುರಿಯವರು ರೈಲ್ವೇ ಮಂತ್ರಿಯಾಗಿದ್ದಾಗ ಪ್ರಣಬ್ ಮುಖರ್ಜಿ ಹಣಕಾಸು ಸಚಿವರಾಗಿದ್ದರು. ಆಗ ಇಬ್ಬರು ಪಶ್ಚಿಮ ಬಂಗಾಲದ ಸಂಸದರು ಒಂದೇ ವರ್ಷ ಬಜೆಟ್ ಮಂಡಿಸಿದ ದಾಖಲೆ ನಿರ್ಮಿಸಿದ್ದರು.

"ಬರ್ಖಾತ್‌ರಕವರು ರೈಲ್ವೇ ಸಚಿವರಾಗಿದ್ದಾಗ ಅವರೊಂದಿಗೆ ಪ್ರಣಬ್ ಮುಖರ್ಜಿಯವರು 1982ರಿಂದ 1984ರವರೆಗೆ ಸತತ ಮೂರು ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದರು" ಎಂದು ಕಾಂಗ್ರೆಸ್ ಮುಖಂಡ ಸುಖೇಂದು ಶೇಖರ್ ರಾಯ್ ನೆನಪಿಸಿಕೊಂಡಿದ್ದಾರೆ.

"ಈಗ ಎಲ್ಲವೂ ಬದಲಾಗಿದೆ. ರಾಜ್ಯದ ಆಕಾಂಕ್ಷೆಗಳೂ ಅಗಾಧ ಮಟ್ಟದಲ್ಲಿದೆ. ಇದನ್ನು ಈಡೇರಿಸಲು ಮಮತಾ ಮತ್ತು ಪ್ರಣಬ್ ಯತ್ನಿಸುತ್ತಾರೆಂಬ ಭರವಸೆ ನಮ್ಮದು" ಎನ್ನುವ ಭರವಸೆಯನ್ನು ರೈಲ್ವೇ ಬಜೆಟ್‌ಗೂ ಮೊದಲು ರಾಯ್ ವ್ಯಕ್ತಪಡಿಸಿದ್ದರು.

ಬಜೆಟ್ ಹಿನ್ನಲೆಯಲ್ಲಿ ಮುಖರ್ಜಿಯವರನ್ನು ಅವರ ತಾಲ್ಕತೋರಾ ರಸ್ತೆಯ ಮನೆಯಲ್ಲಿ ಮಮತಾ ಕಳೆದೊಂದು ವಾರದ ಅವಧಿಯಲ್ಲಿ ಐದು ಬಾರಿ ಭೇಟಿಯಾಗಿದ್ದರು. ಮುಖರ್ಜಿಯವರು ಕೂಡ ಸಂತೋಷದಿಂದಲೇ ಆಕೆಗೆ ಸಹಕರಿಸಿದ್ದರು ಎಂದು ನಿಕಟ ಮೂಲಗಳು ತಿಳಿಸಿವೆ.

ಈಗಾಗಲೇ ಮಮತಾ ಮಂಡಿಸಿರುವ ರೈಲ್ವೇ ಬಜೆಟ್‌ನಲ್ಲಿ ಹೌರಾದಿಂದ ದಿಘಾದವರೆಗೆ ದಿನವಹೀ ರೈಲುಗಳನ್ನು ಘೋಷಿಸಿದ್ದಾರೆ. ಅಲ್ಲದೆ ಜನಸಾಮಾನ್ಯರಿಗೆ ಉಪಯೋಗವಾಗುವಂತೆ ಹಲವು ಸವಲತ್ತುಗಳನ್ನೂ ಪಶ್ಚಿಮ ಬಂಗಾಲದ ಸಚಿವೆ ಪ್ರಕಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ