ಒಂದುವರೆ ವರ್ಷದೊಳಗೆ ರಾಷ್ಟ್ರೀಯ ಗುರುತಿನ ಚೀಟಿ

ಸೋಮವಾರ, 6 ಜುಲೈ 2009 (14:52 IST)
ರಾಷ್ಟ್ರೀಯ ಗುರುತುಚೀಟಿ ಯೋಜನೆಗೆ ಚುರುಕು ಮುಟ್ಟಿಸುವ ದೆಸೆಯಲ್ಲಿ ಸರಕಾರವು ಕಾರ್ಯಪ್ರವೃತ್ತವಾಗಿದ್ದು 120 ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಮೀಸಲಿರಿಸಿದೆ.

ಮೊದಲ ಹಂತದ ರಾಷ್ಟ್ರೀಯ ಗುರುತಿನ ಚೀಟಿಯನ್ನು 12ರಿಂದ 18 ತಿಂಗಳುಗಳೊಳಗೆ ತಲುಪಿಸುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಮುಂಗಡ ಪತ್ರದಲ್ಲಿ 120 ಕೋಟಿ ರೂಪಾಯಿಗಳನ್ನು ವಿತ್ತ ಸಚಿವ ಪ್ರಣಬ್ ಮುಖರ್ಜಿಯವರು ಮೀಸಲಿರಿಸಿದ್ದಾರೆ.

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಗುರುತುಚೀಟಿ ಯೋಜನೆಗೆ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ಇನ್ಫೋಸಿಸ್‌ನ ಸಹಾಧ್ಯಕ್ಷ ನಂದನ್ ನೀಲೇಕಣಿ ನೇಮಕಗೊಂಡಿದ್ದರು.

ರಾಷ್ಟ್ರೀಯ ಗುರುತುಚೀಟಿ ಯೋಜನೆಯು ಅಮೆರಿಕಾದ ಸಾಮಾಜಿಕ ಭದ್ರತಾ ಯೋಜನೆಗೆ ಸಮವಾದುದು. ಈ ಯೋಜನೆಯ ಪ್ರಕಾರ ಭಾರತದ ಪ್ರತಿಯೊಬ್ಬ ನಾಗರಿಕನೂ/ಳೂ ನಿರ್ಧಿಷ್ಟ ಸಂಖ್ಯೆಯನ್ನು ಹೊಂದಿರುತ್ತಾರೆ.

ವ್ಯಕ್ತಿಯು ರಾಷ್ಟ್ರೀಯ ಗುರುತು ಚೀಟಿ ಹೊಂದುವುದರಿಂದ ಸರಕಾರಿ ಅಥವಾ ಖಾಸಗಿ ಕ್ಷೇತ್ರಗಳಲ್ಲಿ ನಾಗರಿಕ ದಾಖಲೆಗಳನ್ನು ಪೂರೈಸುವ ಅಗತ್ಯವಿರುವುದಿಲ್ಲ. ಎಲ್ಲಾ ವ್ಯವಹಾರಗಳಿಗೂ ಇದು ಅನ್ವಯವಾಗಲಿದೆ.

ವೆಬ್ದುನಿಯಾವನ್ನು ಓದಿ