ತೀರಾ ಸಪ್ಪೆ ಬಜೆಟ್ - ಬಿಜೆಪಿ; ಅದ್ಭುತ - ಕಾಂಗ್ರೆಸ್

ಸೋಮವಾರ, 6 ಜುಲೈ 2009 (15:46 IST)
ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಸೋಮವಾರ ಸಂಸತ್ತಿನಲ್ಲಿ ಮಂಡಿಸಿರುವ ಬಜೆಟ್ ಪುಕ್ಕಲುತನದಿಂದ ಕೂಡಿದ್ದಾಗಿದ್ದು, ತೀರಾ ಸಪ್ಪೆಯಾಗಿದೆ; ಅಲ್ಲದೆ ಪರಿಣಾಮಕಾರಿ ಅಂಶಗಳನ್ನು ಹೊಂದಿಲ್ಲ ಎಂದು ಪ್ರತಿಪಕ್ಷ ಬಿಜೆಪಿ ಟೀಕಿಸಿದ್ದರೆ, ಅತ್ತ ಕಾಂಗ್ರೆಸ್ 'ಅದ್ಭುತ' ಎಂದು ಬಣ್ಣಿಸಿದೆ.

"ಈ ಬಜೆಟ್‌ನಲ್ಲಿ ಉಪಯೋಗಕ್ಕೆ ಬರುವಂತಹುದು ಏನಾದರೂ ಇದೆಯೆಂದು ನನಗನ್ನಿಸುತ್ತಿಲ್ಲ. ಇದು ತೀರಾ ಹೇಡಿತನದ್ದು, ನೀರಸವಾದದ್ದು ಮತ್ತು ಪರಿಣಾಮಕಾರಿ ಅಂಶಗಳಿಂದ ಹೊರತಾಗಿದೆ" ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ವಿತ್ತ ಸಚಿವ ಯಶವಂತ್ ಸಿನ್ಹಾ ಪ್ರತಿಕ್ರಿಯಿಸಿದ್ದಾರೆ.

ಅದೇ ಹೊತ್ತಿಗೆ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಮಾತನಾಡುತ್ತಾ, "ನಿಕಟ ಉತ್ತೇಜನ, ಮಧ್ಯಮ ದೂರದೃಷ್ಟಿ ಮತ್ತು ದೀರ್ಘಾವಧಿಯ ಸ್ವರೂಪ ಪರಿಷ್ಕರಣೆಗಾಗಿನ ವಿವೇಚನೆಯನ್ನು ಹೊಂದಿದ ಬಜೆಟ್" ಎಂದಿದ್ದಾರೆ.

"ಜಾಗತಿಕ ಹಿಂಜರಿತ ಸಮಯದಲ್ಲಿ ವಿತ್ತ ಸಚಿವರು ಅದ್ಭುತ ನಿರ್ವಹಣೆ ಮಾಡಿದ್ದು, ಜನತೆಯ ಮೇಲೆ ಯಾವುದೇ ರೀತಿಯ ತೆರಿಗೆಗಳನ್ನು ವಿಧಿಸಿಲ್ಲ" ಎಂದು ಬಜೆಟ್ ನಂತರ ಸಂಸತ್ತಿನ ಹೊರಗೆ ಪತ್ರಕರ್ತರ ಜತೆ ಮಾತನಾಡುತ್ತಾ ತಿಳಿಸಿದರು.

ಮಾರುಕಟ್ಟೆ ಯಾಕೆ ಋಣಾತ್ಮಕ ಪ್ರತಿಕ್ರಿಯೆ ನೀಡುತ್ತಿದೆ ಎಂಬ ಪ್ರಶ್ನೆಗೆ ತಿವಾರಿ, ವಿತ್ತ ಸಚಿವರು ಬಜೆಟ್ ತಯಾರಿಸುವಾಗ ಕೇವಲ ಮಾರುಕಟ್ಟೆಯನ್ನು ಮಾತ್ರ ಗಮನಕ್ಕೆ ತೆಗೆದುಕೊಂಡಿದ್ದಲ್ಲ ಎಂದರು.

ವೆಬ್ದುನಿಯಾವನ್ನು ಓದಿ