ಬರಲಿದೆ 'ಸರಳ್'ನ ಸರಳೀಕೃತ ಅವತಾರ

ಮಂಗಳವಾರ, 7 ಜುಲೈ 2009 (11:45 IST)
ಮೂರು ವರ್ಷಗಳ ಹಿಂದೆ ಭಾರೀ ಚರ್ಚೆಗೊಳಗಾಗಿ ಮೂಲೆ ಸೇರಿದ್ದ ಸರಳೀಕೃತ ತೆರಿಗೆ ಅರ್ಜಿ ನಮೂನೆ 'ಸರಳ್' ಹೊಸ ಅವತಾರದೊಂದಿಗೆ ಬರಲಿದೆ. ಈ ಸಂಬಂಧ ಸೋಮವಾರ ಮಂಡಿಸಲಾದ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿದೆ.

"ಆದಾಯ ತೆರಿಗೆ ಲೆಕ್ಕಪತ್ರ ನಮೂನೆಯು ಸರಳ ಮತ್ತು ತೆರಿಗೆದಾರರ ಸ್ನೇಹಿಯಾಗಿರಬೇಕು. ಆದಷ್ಟು ಬೇಗ 'ಸರಳ್-II' ಪರಿಷ್ಕೃತ ನಮೂನೆಯನ್ನು ಹೊರ ತರಬೇಕೆಂದು ನಾನು ಇಲಾಖೆಗೆ ಸೂಚಿಸಿದ್ದೇನೆ" ಎಂದು 2009-10ರ ಸಾಲಿನ ಆಯವ್ಯಯ ಪತ್ರ ಮಂಡಿಸುತ್ತಾ ಪ್ರಣಬ್ ಮುಖರ್ಜಿ ತಿಳಿಸಿದ್ದರು.

ವಿಶ್ವಾಸಾಧರಿತ ಸರಳ ಮತ್ತು ತಟಸ್ಥ ತೆರಿಗೆ ಪದ್ಧತಿಯನ್ನು ಅನುಷ್ಠಾನಗೊಳಿಸುವ ಹಾದಿಯಲ್ಲಿ ನಾವಿದ್ದೇವೆ. ವರ್ಷಾಂತ್ಯದಲ್ಲಿ ನಮ್ಮ ಗುರಿ ತಲುಪಲು ಬಲಾತ್ಕಾರದ ತೆರಿಗೆ ಸಂಗ್ರಹ ಮಾರ್ಗಗಳನ್ನು ಬಳಕೆ ಮಾಡದೆ ಆದಾಯ ಸೃಷ್ಟಿಸುವ ತೆರಿಗೆ ಪದ್ಧತಿ ನಮಗೆ ಬೇಕಾಗಿದೆ ಎಂದು ಮುಖರ್ಜಿ ನುಡಿದಿದ್ದಾರೆ.

2006, ಆಗಸ್ಟ್ 1ರಂದು ಜಾರಿಗೆ ಬಂದಿದ್ದ ನಾಲ್ಕು ಪುಟಗಳ 'ನಮೂನೆ 2ಎಫ್' ಬದಲಿಗೆ ಒಂದು ಪುಟದ ತೀರಾ ಸುಲಭವಾದ 'ಸರಳ್' ನಮೂನೆಯನ್ನು ಜಾರಿಗೆ ತರುವ ಪ್ರಸ್ತಾಪ ಮಾಡಲಾಗಿದೆ.

ಎಲ್ಲೆಡೆಯಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಸರಕಾರವು 'ನಮೂನೆ 2ಎಫ್'ನ್ನು ಹಿಂದಕ್ಕೆ ಪಡೆದು, ಅದರ ಬದಲಿಗೆ ಆನ್-ಲೈನ್‌ನಲ್ಲಿ ಬಳಕೆ ಮಾಡಬಹುದಾದ ಐಟಿಆರ್ ನಮೂನೆಯನ್ನು ಪ್ರಕಟಿಸಿತ್ತು.

ಸಂಸದೀಯ ಸಹಕಾರ ಸಮಿತಿಯು ಕೂಡ 2ಎಫ್ ನಮೂನೆಯನ್ನು ಕಠಿಣ ಎಂದು ಹೇಳಿದ್ದಲ್ಲದೆ, ಸರಳ ನಮೂನೆಯನ್ನು ಅದರ ಬದಲಿಗೆ ತರುವಂತೆ ಸಲಹೆ ನೀಡಿತ್ತು.

ವೆಬ್ದುನಿಯಾವನ್ನು ಓದಿ