ರೈಲ್ವೆ ಬಜೆಟ್ 2012-13: ಕರ್ನಾಟಕದ ನಿರೀಕ್ಷೆ ಈಡೇರುವುದೇ?

ಮಂಗಳವಾರ, 13 ಮಾರ್ಚ್ 2012 (11:22 IST)
ಕೊಟ್ಟೂರಸ್ವಾಮಿ ಎಂ.ಎಸ್.

PTI
ಪ್ರತಿವರ್ಷದಂತೆ ಈ ವರ್ಷವೂ ನಿರಾಶೆ ರೈಲ್ವೆ ಬಜೆಟ್ ಕನ್ನಡಿಗರಿಗೆ ನಿರಾಶೆಯನ್ನುಂಟು ಮಾಡುವುದೇ ಎನ್ನುವಂತಹ ಪ್ರಶ್ನೆ ಕಾಡುತ್ತಿದೆ. ಆದರೂ ಸಹ 2012-13ರ ಸಾಲಿನ ಕೇಂದ್ರ ರೈಲ್ವೆ ಮುಂಗಡ ಬಜೆಟ್ ಕುರಿತು ಕನ್ನಡಿಗರು ಹೊಸ ನಿರೀಕ್ಷೆಯಿಂದಿದ್ದಾರೆ. ವರದಿಯೊಂದರ ಪ್ರಕಾರ ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ ಐದು ಹೊಸ ರೈಲು ಮಂಜೂರಾಗಲಿದೆ ಎನ್ನುವಂತಹ ವಿಚಾರ ಆಶಾವಾದವನ್ನು ಹುಟ್ಟುಹಾಕಿದೆ.

ಬಿಹಾರಿನಿಂದ ಚುನಾಯಿತರಾಗಿದ್ದ ಲಾಲು ಪ್ರಸಾದ್ ಯಾದವ್ ಮತ್ತು ಪಶ್ಚಿಮ ಬಂಗಾಳದಿಂದ ಚುನಾಯಿತರಾಗಿದ್ದ ಮಮತಾ ಬಾನರ್ಜಿ ತಮ್ಮ ತವರು ರಾಜ್ಯಗಳಿಗೆ ಹೆಚ್ಚಿನಿ ರೈಲು ಮಾರ್ಗಗಳನ್ನು ಮತ್ತು ರೈಲುಗಳನ್ನು ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ರಾಜ್ಯದವರೇ ಆಗಿದ್ದ ಕೇಂದ್ರ ಮಾಜಿ ರೈಲ್ವೆ ಸಚಿವ ಜಾಫರ್ ಶರೀಫ್‌ರ ಕಾಲದಿಂದಲೂ ಕರ್ನಾಟಕಕ್ಕೆ ರೈಲು ಮಾರ್ಗ ಅಥವಾ ರೈಲು ಸಂಚಾರದ ವಿಚಾರವಾಗಿ ಅನ್ಯಾಯವಾಗುತ್ತಲೇ ಬಂದಿದೆ.

ಈ ವರ್ಷದ ರೈಲ್ವೆ ಬಜೆಟಿನಲ್ಲಿ ಸುಮಾರು 500 ಕಿ.ಮೀ. ಹೊಸ ರೈಲು ಮಾರ್ಗಗಳಿಗೆ ಈ ಬಜೆಟ್ ಅವಕಾಶ ನೀಡುವ ಸಾಧ್ಯತೆಯಿರುವುದಾಗಿ ರೈಲ್ವೆಯ ರಾಜ್ಯ ಸಚಿವರಾಗಿರುವ ಕೆ.ಹೆಚ್.ಮುನಿಯಪ್ಪ ಹೇಳಿರುವುದು ಕನ್ನಡಿಗರ ರೈಲಿನಾಸೆಯನ್ನು ಉಳಿಸುವಲ್ಲಿ ಸಹಾಯಕವಾಗಿದೆ. ಅಲ್ಲದೇ ಹೆಚ್ಚಿನ ಸವಲತ್ತು. ಸೌಲಭ್ಯ, ಯೋಜನೆಗಳು ದೊರಕುವ ನಿರೀಕ್ಷೆಯಿದೆ. ಹೊಸದಾಗಿ ಶ್ರವಣಬೆಳಗೊಳ-ಹಾಸನ-ಮೈಸೂರು ಪ್ಯಾಸೆಂಜರ್ ರೈಲು, ಮುಂಬೈ-ಮಂಗಳೂರು-ತಿರುನೆಲ್ವೇಲಿ, ಸೋಲ್ಲಾಪುರ-ಹುಬ್ಬಳ್ಳಿ ಪ್ಯಾಸೆಂಜರ್ ರೈಲುಗಳಿಗೆ ಹಸಿರು ನಿಶಾನೆ ದೊರಕುವ ನಿರೀಕ್ಷಿಸಲಾಗಿದೆ ಎನ್ನುವ ವಿಚಾರ ನಿಜಕ್ಕೂ ಆಶಾಭಾವನೆಯನ್ನು ಮೂಡಿಸಿದೆ.

ಬಹುನಿರೀಕ್ಷೆಯಲ್ಲಿರುವ ಶ್ರವಣಬೆಳಗೊಳ-ಬೆಂಗಳೂರು, ಹುಬ್ಬಳ್ಳಿ-ಅಂಕೋಲ, ಬೀದರ್-ಗುಲ್ಬರ್ಗ, ಹೊಸಪೇಟೆ-ಕೊಟ್ಟೂರು-ಹರಿಹರ, ಕುಡಿಚಿ-ಬಾಗಲಕೋಟೆಗಳ ನಡುವೆ ಹೊಸ ರೈಲುಗಳು ಪ್ರಾರಂಭವಾಗಬಹುದೇ ಎನ್ನುವಂತಹ ಪ್ರಶ್ನೆಗಳೆದ್ದಿವೆ. ಇದಲ್ಲದೇ ಚಿತ್ರದುರ್ಗ-ಬೆಂಗಳೂರು ನಡುವಿನ ರೈಲು ಮಾರ್ಗದಿಂದ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅಂತೆಯೇ ಹರಿಹರ-ಶಿವಮೊಗ್ಗ ನಡುವಿನ ರೈಲು ಮಾರ್ಗ ನಿರ್ಮಾಣಕ್ಕೆ ತ್ವರಿತವಾಗಿ ಸರಕಾರ ಮುಂದಾಗಬೇಕಿದೆ.

ವೆಬ್ದುನಿಯಾವನ್ನು ಓದಿ